ಕೊಡಗಿನಲ್ಲಿ ಕೊರೋನ ಸೋಂಕಿತರ ಸಂಖ್ಯೆ 60ಕ್ಕೆ ಏರಿಕೆ

Update: 2020-07-01 16:45 GMT

ಮಡಿಕೇರಿ, ಜು.1 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬುಧವಾರ 13 ಪ್ರಕರಣಗಳು ಪತ್ತೆಯಾಗಿವೆ. ಮೂರು ತಿಂಗಳ ಮಗುವನ್ನು ಕೂಡ ವೈರಸ್ ಕಾಡಿದ್ದು, ಸೋಂಕಿತರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ.  

ವಿರಾಜಪೇಟೆ ತಾಲ್ಲೂಕು ಹುಂಡಿ ಗ್ರಾಮದ 3 ತಿಂಗಳ ಮಗು ಮತ್ತು 6 ವರ್ಷದ ಮಗುವಿನಲ್ಲಿ, 56 ಹಾಗೂ 87 ವರ್ಷದ ವ್ಯಕ್ತಿಗಳಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ. 

ಸೋಮವಾರಪೇಟೆ ತಾಲ್ಲೂಕು ಬಳಗುಂದ ಗ್ರಾಮದ 47 ವರ್ಷದ ಪುರುಷ, 37 ವರ್ಷದ ಮಹಿಳೆ, ನೆಲ್ಲಿಹುದಿಕೇರಿ ಗ್ರಾಮದ 61, 43 11, 38, 29 ವರ್ಷದ ವ್ಯಕ್ತಿಗಳಲ್ಲಿ, ಶಿರಂಗಾಲ ಗ್ರಾಮದ ಗುಂಡೂರಾವ್ ಬಡಾವಣೆಯ 47 ವರ್ಷದ ವ್ಯಕ್ತಿ ಮತ್ತು ವಿರಾಜಪೇಟೆ ತಾಲ್ಲೂಕು ತಿತಿಮತಿ ಗ್ರಾಮದ 65 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.

ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 60 ಕ್ಕೆ ಏರಿಕೆಯಾಗಿದ್ದು, ಇವರುಗಳಲ್ಲಿ ಮೂವರು ಗುಣಮುಖರಾಗಿದ್ದಾರೆ. ಉಳಿದ  57 ಮಂದಿಗೆ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಜಿಲ್ಲೆಯಲ್ಲಿ ಪ್ರಸ್ತುತ ನಿಯಂತ್ರಿತ ಪ್ರದೇಶಗಳ ಸಂಖ್ಯೆ ಒಟ್ಟು 24 ಆಗಿದೆ. 

ತಾಲ್ಲೂಕುಗಳಲ್ಲಿ ಕೋವಿಡ್ ಕೇಂದ್ರ
ಕೋವಿಡ್-19 ರ ಸಂಬಂಧ ಜಿಲ್ಲೆಯಲ್ಲಿ ದಿನೇ ದಿನೇ  ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ  ಜಿಲ್ಲೆಯ ಮೂರು ತಾಲ್ಲೂಕಿನಲ್ಲಿ ಸರ್ಕಾರಿ ಸಂಸ್ಥೆಗಳನ್ನು ಕೋವಿಡ್ ಪ್ರಕರಣಗಳ ಆರೈಕೆ ಕೇಂದ್ರಗಳಿಗಾಗಿ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. 

ಈ ಕೇಂದ್ರಗಳಲ್ಲಿ ಗುರುವಾರದಿಂದಲೇ ಸೋಂಕಿತ ಪ್ರಕರಣಗಳನ್ನು ದಾಖಲಿಸಿ ಆರೈಕೆ ನೀಡಲಾಗುವುದು. ವೈದ್ಯಕೀಯ ಸಿಬ್ಬಂದಿಗಳು ದಿನದ 24 ಗಂಟೆ ಹಾಜರಿದ್ದು, ಸೋಂಕಿತರ ಆರೈಕೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News