‘ಕೋವಿಡ್ ಪರಿಸ್ಥಿತಿ’ ಕೇಂದ್ರ ಸರಕಾರ ಸಮರ್ಥವಾಗಿ ನಿಭಾಯಿಸಿದೆ: ಡಾ. ಅಶ್ವತ್ಥ ನಾರಾಯಣ

Update: 2020-07-01 18:26 GMT

ಬೆಂಗಳೂರು, ಜು.1: ವಿಶ್ವದ ಉಳಿದೆಲ್ಲ ಕಡೆಗಳಿಗಿಂತ ಹೆಚ್ಚು ಜನದಟ್ಟಣೆ ಇರುವ ನಮ್ಮ ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಅತ್ಯಲ್ಪವಾಗಿದೆ. ಬಡತನ, ವಲಸೆ ಕಾರ್ಮಿಕರ ತೊಂದರೆಯ ನಡುವೆಯೂ ಕೇಂದ್ರ ಸರಕಾರವು ಸಮರ್ಥವಾಗಿ ನಿಭಾಯಿಸಿದೆ. ಎಲ್ಲ ರಾಜ್ಯ ಸರಕಾರಗಳಿಗೂ ನಿರಂತರವಾಗಿ ಅಗತ್ಯವಿರುವ ಮಾರ್ಗಸೂಚಿ ನೀಡುತ್ತ ಸಮರ್ಪಕ ಕೆಲಸ ನಡೆಯುವಂತೆ ನೋಡಿಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಬುಧವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರವು ಎಲ್ಲರೂ ಮೆಚ್ಚುವಂತ ಕೆಲಸ ಮಾಡಿದೆ. ಕೊರೋನ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ನಾಡಿನ ಪ್ರತಿ ಮನೆಯನ್ನೂ ತಲುಪಿ, ಆಹಾರ ಧಾನ್ಯ, ಔಷಧಿ, ಮಾಸ್ಕ್ ಸೇರಿದಂತೆ ಅಗತ್ಯ ಸೌಕರ್ಯ ವಿತರಣೆ ಮಾಡಿ, ಜನರ ನೆರವಿಗೆ ನಿಂತಿದ್ದಾರೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ, ಕೇಂದ್ರ ಸರಕಾರ ಈ ಕೊರೋನ ಸಂಕಷ್ಟದ ಪರಿಸ್ಥಿತಿಯಲ್ಲಿ ಬಡವರು, ಅಸಹಾಯಕರಿಗೆ ತೊಂದರೆಯಾಗಬಾರದು, ಯಾರೊಬ್ಬರೂ ಉಪವಾಸದಿಂದ ನರಳಬಾರದು ಎಂಬ ಮಾನವೀಯ ದೃಷ್ಟಿಯಿಂದ ನವೆಂಬರ್‍ವರೆಗೆ ಉಚಿತ ಪಡಿತರ ವಿತರಿಸಲು ತೀರ್ಮಾನಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ಒಂದು ವರ್ಷದ ಸಾಧನೆ ಮತ್ತು ಕೋವಿಡ್-19 ಜಾಗೃತಿ ಅಭಿಯಾನದಲ್ಲಿ ಮನೆ ಸಂಪರ್ಕ, ಕರಪತ್ರ ವಿತರಣೆ, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ, ವಿಡಿಯೋ ಕಾನ್ಫರೆನ್ಸ್, ವರ್ಚುವಲ್ ರ್ಯಾಲಿಗಳು, ಸ್ವದೇಶಿ ವಸ್ತುಗಳು ಬಳಸುವ ಸಂಕಲ್ಪ ಸೇರಿದಂತೆ ಎಲ್ಲ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮ ಇದೇ ಜು.6ರ ಸಂಜೆ 6 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 50 ಲಕ್ಷ ಜನರು ಭಾಗವಹಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News