ಎಸೆಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷೆಗೆ 15,946 ವಿದ್ಯಾರ್ಥಿಗಳು ಗೈರು: ಸಚಿವ ಸುರೇಶ್ ಕುಮಾರ್

Update: 2020-07-01 18:28 GMT

ಬೆಂಗಳೂರು, ಜು.1: ಎಸೆಸೆಲ್ಸಿ ಸಮಾಜ ವಿಜ್ಞಾನ ಪರೀಕ್ಷೆಯು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದಿದ್ದು, ಶೇ.97.96 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 15,946 ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ನಡೆದ ಸಮಾಜ ವಿಜ್ಞಾನ ಪರೀಕ್ಷೆಗೆ 7,84,287 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 7,68,341 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.

ಕಂಟೈನ್ಮೆಂಟ್ ಪ್ರದೇಶಗಳ 3,363 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 613 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಹೋಮ್ ಕ್ವಾರಂಟೈನ್‍ನಲ್ಲಿರುವ ಹಾಗೂ ಕೋವಿಡ್-19 ದೃಢಪಟ್ಟಿರುವ ವಿದ್ಯಾರ್ಥಿಗಳಿಗೆ ಈಗಿನ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಅವರೆಲ್ಲರಿಗೂ ಪೂರಕ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನ ನಿರ್ಮಲಾ ರಾಣಿ ಪ್ರೌಢಶಾಲೆಯ ವಿದ್ಯಾರ್ಥಿ ರಕ್ಷಿತಾ ಅಪೆಂಡಿಸೈಟಿಸ್ ತೊಂದರೆಯಿಂದ ಬಳಲುತ್ತಿದ್ದು, ಇಂದು ಮಲ್ಲೇಶ್ವರದ ಕೆಪಿಎಸ್ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ತೀವ್ರ ಹೊಟ್ಟೆನೋವಿನಿಂದ ಬಳಲಿದ್ದು, ಆಕೆಯನ್ನು ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದೆ. ಮುಂದಿನ ಪೂರಕ ಪರೀಕ್ಷೆಯಲ್ಲಿ ಆಕೆಗೆ ಬರೆಯುವ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ಜೂ.27ರ ಗಣಿತ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ನಾಲ್ವರು ವಿದ್ಯಾರ್ಥಿನಿಯರು, ಒಬ್ಬ ವಿದ್ಯಾರ್ಥಿಗೆ ಹಳೆ ಪಠ್ಯಕ್ರಮದ ಪ್ರಶ್ನೆಪತ್ರಿಕೆ ವಿತರಿಸಲಾಗಿದೆ ಎಂಬ ವರದಿಗಳು ಬಂದಿವೆ. ಈ ಪ್ರಕರಣದ ಪರಿಶೀಲನೆಗಾಗಿ ಐದು ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಪ್ರತ್ಯೇಕವಾಗಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಇದರಲ್ಲಿ ಅಚಾತುರ್ಯವಾಗಿದ್ದಲ್ಲಿ ಸಂಬಂಧಿಸಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದರು.

-ಪ್ರತಿದಿನದ ಪರೀಕ್ಷೆ ಮುಗಿದ ಬಳಿಕ ಪರೀಕ್ಷಾ ಕೇಂದ್ರದ ಸಿಸಿ ಟಿವಿ ಫುಟೇಜ್‍ಗಳನ್ನು ಮೇಲಾಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು, ಹಾಗೂ ಅದನ್ನು ಪರಾಮರ್ಶಿಸುವುದನ್ನು ಕಡ್ಡಾಯವಾಗಿ ನಿರ್ವಹಿಸತಕ್ಕದ್ದೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಪರೀಕ್ಷಾ ಕೇಂದ್ರದ ಸಿಸಿ ಟಿವಿ ಫುಟೇಜ್ ದಾಖಲೆಗಳು ಸಂಪೂರ್ಣ ಲಭ್ಯವಾಗದಿದ್ದಲ್ಲಿ ಅಥವಾ ತಿರುಚಿರುವುದು ಕಂಡು ಬಂದಲ್ಲಿ ಸಂಬಂಧಿಸಿದವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗುವುದು.
-ಸುರೇಶ್‍ಕುಮಾರ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News