ಶೀಘ್ರದಲ್ಲೇ ನೂತನ ಮಾರ್ಗಸೂಚಿ ಬಿಡುಗಡೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

Update: 2020-07-01 18:55 GMT

ಬೆಂಗಳೂರು, ಜು.1: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಏರಿಕೆ ಸಂಬಂಧ ತಜ್ಞರ ಸಲಹೆಗಳನ್ನು ಸ್ವೀಕರಿಸಲಾಗಿದ್ದು, ಶೀಘ್ರದಲ್ಲೇ ಸಿಎಂ ನೇತೃತ್ವದ ಉನ್ನತ ಮಟ್ಟದ ಮತ್ತೊಂದು ಸಭೆ ಬಳಿಕ ಹೊಸ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಬುಧವಾರ ಸಿಎಂ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ತಜ್ಞರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಶವಸಂಸ್ಕಾರ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದೊಂದಿಗೆ ಮಾತನಾಡಿದ್ದು ಅಲ್ಲಿನ ಜಿಲ್ಲಾಧಿಕಾರಿಯವರು ಈ ಘಟನೆಗಾಗಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಈ ಘಟನೆಗೆ ಕಾರಣರಾದ 6 ಮಂದಿಯನ್ನು ಅಮಾನತುಗೊಳಿಸಲಾಗಿದೆ, ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದು ಎಂದರು.

ಕೊರೋನ ಸೋಂಕಿನ ಲಕ್ಷಣ ಇಲ್ಲದ ಅಥವಾ ಅತ್ಯಂತ ಕಡಿಮೆ ಜ್ವರದ ಲಕ್ಷಣಗಳಿದ್ದರೆ, ಅವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ (ಹೋಮ್ ಐಸೋಲೇಷನ್), ಅವರ ಆರೋಗ್ಯದ ಮೇಲೆ ನಿಗಾ ಇಡುವುದು ಸೂಕ್ತ. ಇದರಿಂದ ಆಸ್ಪತ್ರೆಗಳ ಮೇಲೆ ಒತ್ತಡ ತಡೆಯಬಹುದಾಗಿದೆ ಎಂದು ಬಹುತೇಕ ತಜ್ಞರು ಅಭಿಪ್ರಾಯಪಟ್ಟರು. ತೀವ್ರ ಸೋಂಕಿನ ಲಕ್ಷಣಗಳು ಹೊಂದಿರುವವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿರುವವರು ಸೋಂಕಿತರಾದಲ್ಲಿ, ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಆದ್ಯತೆ ನೀಡಬೇಕು. ಅಲ್ಲದೆ, ಟೆಲಿ ಮೆಡಿಸಿನ್ ಮೂಲಕ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಸಿಬ್ಬಂದಿ ಹಾಗೂ ಪರಿಕರಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದರು.

ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ ಭಾರತದ ಪ್ರತಿನಿಧಿ ಆಶಿಶ್ ಸತ್ಪತಿ, ಕಿಮ್ಸ್‍ನ ಡಾ.ಲೋಕೇಶ್, ಮಣಿಪಾಲ ಆಸ್ಪತ್ರೆಯ ಮುಖ್ಯಸ್ಥ ಡಾ.ಸುಧಾಕರ್ ಬಲ್ಲಾಳ್, ಡಾ.ಅಂಜನಪ್ಪ, ಡಾ.ಶರಣ್ ಪಾಟೀಲ್, ಡಾ.ಪ್ರಭುದೇವ್, ಡಾ.ಪ್ರದೀಪ್ ರಂಗಪ್ಪ, ಡಾ.ಪ್ರಕಾಶ್, ಡಾ.ಕುಮಾರ್, ಡಾ.ಗಿರಿಧರ್ ಬಾಬು, ಡಾ.ಷರೀಫ್, ಡಾ.ರಂಗನಾಥ, ಡಾ.ಸತೀಶ್, ಡಾ.ಭುಜಂಗ ಶೆಟ್ಟಿ ಸೇರಿದಂತೆ ಅನೇಕ ತಜ್ಞರು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News