ಮುಂದಿನ ವರ್ಷ 20 ಸಾವಿರ ಕೋಟಿ ರೂ. ಸಾಲ ವಿತರಣೆ ಗುರಿ: ಸಹಕಾರ ಸಚಿವ ಸೋಮಶೇಖರ್

Update: 2020-07-02 11:45 GMT

ಮಡಿಕೇರಿ ಜು.2: ಪ್ರಸಕ್ತ ಸಾಲಿನಲ್ಲಿ ರಾಜ್ಯದ ರೈತರಿಗೆ 14,500 ಕೋಟಿ ಸಾಲ ನೀಡಲು ಚಾಲನೆ ನೀಡಲಾಗಿದ್ದು, ಮುಂದಿನ ಸಾಲಿನಲ್ಲಿ ರೈತರಿಗೆ 20 ಸಾವಿರ ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ. ಈ ಸಂಬಂಧ  ಹೆಚ್ಚಿನ ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ನಗರದ ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಹಕಾರ ಇಲಾಖೆ ವತಿಯಿಂದ ಕೊರೋನ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರಿಗೆ ತಲಾ 3000 ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮಕ್ಕೆ ಚೆಕ್ ನೀಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ವರ್ಷ ರೈತರಿಗೆ 13,500 ಕೋಟಿ ರೂಪಾಯಿ ಸಾಲ ನೀಡಲಾಗಿತ್ತು.  ಪ್ರಸಕ್ತ ಸಾಲಿನಲ್ಲಿ ನಬಾರ್ಡ್‍ನಿಂದ ಹೆಚ್ಚುವರಿ ಒಂದು ಸಾವಿರ ಕೋಟಿ ರೂಪಾಯಿ ಲಭಿಸಿರುವುದರಿಂದ ಈ ಬಾರಿ 14,500 ಕೋಟಿ ರೂಪಾಯಿ ಸಾಲ ನೀಡಲು ಚಾಲನೆ ನೀಡಲಾಗಿದೆ.  ಎಲ್ಲ ರೈತರಿಗೂ ಸಂಪೂರ್ಣವಾಗಿ ಸಾಲ ಸಿಗಬೇಕು ಎಂಬ ದೃಷ್ಟಿಯಿಂದ ಮುಂದಿನ ಸಾಲಿನಲ್ಲಿ 20 ಸಾವಿರ ಕೋಟಿ ರೂಪಾಯಿ ಸಾಲದ ವ್ಯವಸ್ಥೆ ಮಾಡಬೇಕು. ಈ ಸಂಬಂಧ ಕೇಂದ್ರದ ಗಮನ ಸೆಳೆಯುವಂತೆ   ಮುಖ್ಯಮಂತ್ರಿಗಳ ಬಳಿಯೂ ಮನವಿ ಮಾಡಿರುವುದಾಗಿ ಸಚಿವರು ನುಡಿದರು.

ಆಶಾ ಕಾರ್ಯಕರ್ತೆಯರಿಗೆ ಶೀಘ್ರ ಸಾಲ: ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ಭದ್ರತೆ ಕೊಡುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಚಿಂತನೆ ನಡೆಯುತ್ತಿದೆ. ಸ್ವಸಹಾಯ ಸಂಘ ಹಾಗೂ ಸ್ತ್ರೀಶಕ್ತಿ ಸಂಘಗಳ ಮಾದರಿ ಸಾಲ ನೀಡುವ ಸಂಬಂಧ ಈಗಾಗಲೇ ಸರ್ಕಾರದ ಮಟ್ಟದಲ್ಲಿ 2-3 ಸುತ್ತಿನ ಸಭೆಗಳು ನಡೆದಿದ್ದು, ಶೀಘ್ರದಲ್ಲಿಯೇ ನಿರ್ಧಾರ ಪ್ರಕಟಿಸಲಾಗುವುದು ಎಂದು ಅವರು ನುಡಿದರು.

ರಾಜ್ಯದಲ್ಲಿ 42,685 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹಧನ ವಿತರಣೆ ಮಾಡಲಾಗುತ್ತಿದ್ದು, ಈಗಾಗಲೇ 23 ಜಿಲ್ಲೆಗಳ ಸುಮಾರು 21 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ವಿತರಣೆ ಮಾಡಲಾಗಿದೆ. ಶೀಘ್ರದಲ್ಲಿ ಎಲ್ಲರಿಗೂ ಸಂದಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೆ   ತಾನೇ ಖುದ್ದು ಭೇಟಿ ನೀಡಿ ಆಯಾ ಶಾಸಕರ ಸಮ್ಮುಖದಲ್ಲಿ ವಿತರಣೆ ಮಾಡಿ, ಆಶಾ ಕಾರ್ಯಕರ್ತೆಯರ ಸೇವೆಗೆ ಬೆನ್ನುತಟ್ಟುವ ಕಾರ್ಯ ಮಾಡುತ್ತಿರುವುದಾಗಿ ಅವರು ಹೇಳಿದರು.   

ರಾಜ್ಯ ಸರ್ಕಾರದ ನಿಯಮಗಳನ್ನು ನಾವು ಎಂದೂ ಮುರಿಯುತ್ತಿಲ್ಲ. 50ರಿಂದ 80 ಮಂದಿಯನ್ನು ಸೇರಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ಸುರಕ್ಷಿತ ಅಂತರ ಬಹಳ ಮುಖ್ಯ. ಹಾಗಾಗಿ ಎಲ್ಲರೂ ಸುರಕ್ಷತೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಚಿವರು ಸಲಹೆ ನೀಡಿದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಸಚಿವ ಸೋಮಶೇಖರ್ ಅವರು ಸಹಕಾರ ಇಲಾಖೆ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 53 ಕೋಟಿ ರೂಪಾಯಿಯನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಇದಕ್ಕೆ ಅನೇಕ ಸಹಕಾರಿಗಳ ಕೊಡುಗೆ ಇದೆ. ಇದು ಉತ್ತಮ ಕಾರ್ಯ ಎಂದು ತಿಳಿಸಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಎಸ್.ಟಿ.ಸೋಮಶೇಖರ್ ಅವರು ಈಗ ಅದೇ ಖಾತೆಗೆ ಸಚಿವರಾಗಿದ್ದು, ಅಭಿವೃದ್ಧಿ ದೃಷ್ಟಿಯಿಂದ ಸಹಾಯವಾಗಿದೆ. ಅವರ ಇಲಾಖೆಯಿಂದ ಪ್ರೋತ್ಸಾಹಧನ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ರುಪೇ ಕಾರ್ಡ್ ಬಗ್ಗೆ ಹೊಸ ಆದೇಶ ಹೊರಡಿಸಲಾಗಿತ್ತು. ಇದರಿಂದ ರೈತರಿಗೆ ತೀವ್ರ ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ನಾವೆಲ್ಲರೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸಹಕಾರ ಸಚಿವ ಸೋಮಶೇಖರ್ ಅವರ ಗಮನಕ್ಕೂ ತಂದಾಗ ಅವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಿಎಂಗೆ ಮನವರಿಕೆ ಮಾಡಿ ಹಳೇ ಪದ್ಧತಿಯನ್ನೇ ಯಥಾವತ್ತಾಗಿ  ಮುಂದುವರಿಸುವಂತೆ ಪುನರ್ ಆದೇಶ ನೀಡುವಂತೆ ಮಾಡಿದ್ದಾರೆ. ಇದಕ್ಕಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಜನರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಬೇಕು. ಸ್ಯಾನಿಟೈಸರ್, ಮಾಸ್ಕ್ ಹಾಕಿಕೊಳ್ಳುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿಧಾನಪರಿಷತ್ ಸದಸ್ಯ  ಸುನಿಲ್ ಸುಬ್ರಮಣಿ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯಾ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ,  ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News