×
Ad

ರೈತರಿಗೆ ಉಚಿತವಾಗಿ ಬಿತ್ತನೆಬೀಜ ವಿತರಣೆಗೆ ಸಿಎಂ ಚಾಲನೆ

Update: 2020-07-02 17:22 IST

ಬೆಂಗಳೂರು, ಜು. 2: ಮಾರಕ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಸಣ್ಣ ಹಿಡುವಳಿದಾರ ರೈತರಿಗೆ ರಾಗಿ, ಜೋಳ, ಸಜ್ಜೆ ಸೇರಿದಂತೆ ಉಚಿತವಾಗಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಬಿತ್ತನೆಬೀಜ ವಿತರಣೆ ಮೂಲಕ ಚಾಲನೆ ನೀಡಿದರು.

ಗುರುವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೋನ ಸೋಂಕಿನ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೆರವು ನೀಡುವ ದೃಷ್ಟಿಯಿಂದ ಬಾಯರ್ ಕಂಪೆನಿ ರೂಪಿಸಿರುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಯಡಿಯೂರಪ್ಪ, ಸಣ್ಣ ಹಿಡುವಳಿದಾರರಿಗೆ ಮತ್ತು ಕೊರೋನ ಸೋಂಕಿನ ಹಿನ್ನಲೆಯಲ್ಲಿ ನಗರಗಳಲ್ಲಿ ಕೆಲಸ ತೊರೆದು ಗ್ರಾಮೀಣ ಪ್ರದೇಶಕ್ಕೆ ಹಿಂದಿರುಗಿರುವ ವಲಸೆ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.

ರೈತರು ನಮ್ಮ ಆರ್ಥಿಕತೆಯ ಬೆನ್ನೆಲುಬು. ರೈತರ ಶ್ರಮದಿಂದಲೇ ನಮ್ಮೆಲ್ಲರಿಗೂ ಅನ್ನ ದೊರೆಯುತ್ತಿದೆ. ಮುಂಗಾರು ಆರಂಭಗೊಳ್ಳುತ್ತಿರುವ ಈ ಸಂದರ್ಭದಲ್ಲಿ ರೈತರಿಗೆ ಉಚಿತವಾಗಿ ಬಿತ್ತನೆ ನೀಡುವ ಮೂಲಕ ಕಂಪೆನಿ ರೈತರ ಜೀವನವನ್ನು ಸುಧಾರಿಸಲು ಮುಂದಾಗಿರುವುದು ಮಾದರಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರ್ ಗೌಡ ಪಾಟೀಲ್, ಕಂಪೆನಿಯ ಸಿಇಓ ಡಿ.ನರೇನ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News