ಸರಕಾರ ಇನ್ನೂ ಮೈಮರೆತರೆ ಸೋಂಕಿತರು ಬೀದಿಯಲ್ಲಿ ಸಾಯುವ ಸ್ಥಿತಿ ನಿರ್ಮಾಣ: ಕುಮಾರಸ್ವಾಮಿ ಎಚ್ಚರಿಕೆ

Update: 2020-07-02 13:04 GMT

ಬೆಂಗಳೂರು, ಜು. 2: ರಾಜ್ಯ ಸರಕಾರ ಇಂಗು ತಿಂದ ಮಂಗನಂತಾಗಿದ್ದು, ಕೊರೋನ ಸೋಂಕಿತರ ಸಂಖ್ಯೆಯ ಗಣನೀಯ ಏರಿಕೆಯನ್ನು ತಡೆಯಲು ಪೇಚಾಡುತ್ತಿದೆ. ನೆರೆಯ ಕೇರಳ ಸರಕಾರ ಕೊರೋನ ಸೋಂಕು ತಡೆಗೆ ಕೈಗೊಂಡ ಕ್ರಮಗಳ 'ಸಿದ್ಧ' ಮಾದರಿ ಕಣ್ಣೆದುರಿಗಿದೆ. ರಾಜ್ಯದ ಸಚಿವರಲ್ಲಿ ಸಮನ್ವಯವಿಲ್ಲ. ಒಬ್ಬೊಬ್ಬರದ್ದು ಒಂದೊಂದು ನಿಲುವು. ಇವರ ತಿಕ್ಕಾಟದಲ್ಲಿ ರಾಜ್ಯದ ಜನತೆ ಹೈರಾಣಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, 'ಕೊರೋನ ಸೋಂಕು ಪೀಡಿತರು ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದೆ, ಚಿಕಿತ್ಸೆ ಇಲ್ಲದೆ ಮನೆಯಲ್ಲೇ ನರಳಿ ಸಾಯುತ್ತಿದ್ದಾರೆ. ಆರಂಭಿಕ ಹಂತದಲ್ಲೇ ಕೋವಿಡ್-19 ನಿರ್ವಹಣೆಯಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಮೂರು ತಿಂಗಳಿಂದ ಮುಖ್ಯಮಂತ್ರಿ ಸೇರಿದಂತೆ ಸಚಿವರು ಮಾತಿನ ಮಂಟಪ ಕಟ್ಟುವುದರಲ್ಲಿ ಕಾಲ ಕಳೆದರು' ಎಂದು ವಾಗ್ದಾಳಿ ನಡೆಸಿದ್ದಾರೆ.

'ಕೊರೋನ ಸೋಂಕು ಶರವೇಗದಲ್ಲಿ ಎಲ್ಲೆಡೆ ವ್ಯಾಪಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯದಾದ್ಯಂತ ಸೋಂಕಿತರು ಚಿಕಿತ್ಸೆಯಿಲ್ಲದೆ ಸಾಯುತ್ತಿರುವ ಘಟನೆಗಳ ಕರುಳು ಹಿಂಡುತ್ತಿವೆ. ಸರಕಾರ ಇನ್ನೂ ಮೈಮರೆತರೇ ಸೋಂಕಿತರು ಬೀದಿ ಬೀದಿಯಲ್ಲಿ ಸಾಯುವ ಸ್ಥಿತಿ ನಿರ್ಮಾಣವಾಗುತ್ತದೆ' ಎಂದು ಕುಮಾರಸ್ವಾಮಿ, ರಾಜ್ಯ ಸರಕಾರಕ್ಕೆ ಇದೇ ವೇಳೆ ಎಚ್ಚರಿಕೆಯನ್ನು ನೀಡಿದ್ದಾರೆ.

ರಾಜ್ಯ ಸರಕಾರ ಇನ್ನಾದರೂ ಸಮರೋಪಾದಿಯಲ್ಲಿ ಕಾರ್ಯ ಪ್ರವೃತ್ತವಾಗಲಿ. ಕೊರೋನ ವೈರಸ್ ಸೋಂಕು ಸಮರ್ಪಕ ನಿರ್ವಹಣೆಗೆ ನಾನು ಕೊಟ್ಟ ಹತ್ತಾರು ಸಲಹೆಗಳನ್ನು ಲಘುವಾಗಿ ಪರಿಗಣಿಸಿದ ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದು ಕುಮಾರಸ್ವಾಮಿ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತೀಕ್ಷ್ಣ ರೀತಿಯಲ್ಲಿ ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News