ಕೊರೋನ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಕಾನೂನು ಜಾರಿ: ಸಚಿವ ಡಾ.ಕೆ.ಸುಧಾಕರ್

Update: 2020-07-02 13:15 GMT

ಬೆಂಗಳೂರು, ಜು. 2: ಕೊರೋನ ಸೋಂಕಿನಿಂದ ಮೃತಪಟ್ಟವರ ಮೃತದೇಹಗಳನ್ನು ಅಮಾನವೀಯವಾಗಿ ಎಳೆದಾಡಿದ ಹಲವು ಘಟನೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸ್ಪಷ್ಟ ಕಾನೂನು ಜಾರಿಗೆ ತರಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಕೋವಿಡ್ ಪರೀಕ್ಷಾ ಸಾಮಥ್ರ್ಯ ಹೆಚ್ಚಿಸುವ ಮತ್ತು ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಹಂಚಿಕೆ ಸಮರ್ಪಕ ವ್ಯವಸ್ಥೆ ರೂಪಿಸಲು ತನ್ನ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಯಾರೇ ಮೃತಪಟ್ಟರೂ ಅವರ ಅಂತ್ಯ ಸಂಸ್ಕಾರ ಮಾನವೀಯ ರೀತಿಯಲ್ಲಿ ನಡೆಸಬೇಕು. ವ್ಯಕ್ತಿ ಸಾವನ್ನಪ್ಪಿದ ಕೂಡಲೇ ಮೃತದೇಹವನ್ನು ಅಮಾನವೀಯವಾಗಿ ನೋಡುವುದು ಮನುಷ್ಯತ್ವವಲ್ಲ. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿದಂತೆ ಎಚ್ಚರ ವಹಿಸಲಾಗುವುದು ಎಂದರು.

ಕೊರೋನ ಸೋಂಕಿತರ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರಕ್ಕೆ ಜಾಗದ ಕೊರತೆ ಇಲ್ಲ. ಅಂತಹ ಸ್ಥಿತಿ ಇನ್ನೂ ಬೆಂಗಳೂರಿನಲ್ಲಿ ನಿರ್ಮಾಣವಾಗಿಲ್ಲ. ಮುಂದೆಯೂ ಆಗುವುದಿಲ್ಲ. ಆ ಮಟ್ಟದಲ್ಲಿ ಕೊರೋನ ಸೋಂಕಿತರ ಸಾವುಗಳು ಬೆಂಗಳೂರು ನಗರದಲ್ಲಿ ಸಂಭವಿಸುತ್ತಿಲ್ಲ ಎಂದ ಅವರು, ಸೋಂಕಿನಿಂದ ಮೃತಪಟ್ಟರ ಅಂತ್ಯ ಸಂಸ್ಕಾರವನ್ನು ಸಮರ್ಪಕವಾಗಿ ನಡೆಸಲು ಕ್ರಮ ವಹಿಸಲಾಗುತ್ತಿದೆ ಎಂದರು.

ಮನೆಯಲ್ಲೇ ಚಿಕಿತ್ಸೆ: ಕೊರೋನ ಸೋಂಕಿನ ಲಕ್ಷಣ ಇರುವವರಿಗೆ ಮತ್ತು ಸೋಂಕಿನ ಲಕ್ಷಣ ಇಲ್ಲದಿರುವವರಿಗೆ ಸೋಂಕು ದೃಢಪಟ್ಟಿರುತ್ತದೆ. ಆದರೆ, ಅವರಿಗೆ ಯಾವುದೇ ರೋಗ ಲಕ್ಷಣ ಇರುವುದಿಲ್ಲ. ಅಂತಹವರನ್ನು 'ಎ' ಕೆಟಗರಿ ಅಂತ ವರ್ಗಿಕರಣ ಮಾಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ನಿನ್ನೆ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ತಜ್ಞರ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ಸೋಂಕಿನ ಲಕ್ಷಣ ಇಲ್ಲದವರಿಗೆ ಮನೆಯಲ್ಲಿ ಚಿಕಿತ್ಸೆ ಕೊಡುವ ಸಲಹೆ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ. ಕೊರೋನ ಸೋಂಕಿನ ಬಗ್ಗೆ ವಿಶ್ವದಲ್ಲಿ ಅನೇಕ ಕಡೆ ಹೀಗೆಯೇ ಮಾಡಿದ್ದು, ರಾಜ್ಯದಲ್ಲಿಯೂ ಅದೇ ರೀತಿಯಲ್ಲಿ ಸೋಂಕಿತರ ಮೇಲೆ ನಿಗಾ ಇರಿಸಲಾಗುವುದು ಎಂದ ಅವರು, ಸೋಂಕಿನ ಲಕ್ಷಣ ತೀವ್ರ ಸ್ವರೂಪದಲ್ಲಿರುವವರನ್ನು ಆಸ್ಪತ್ರೆಗಳಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ದೊಡ್ಡ ಸಂಖ್ಯೆಯಲ್ಲಿ ಜನರು ಹೊರ ರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಜನಜೀವನ ಸಹಜ ಸ್ಥಿತಿಗೆ ತರಲು ಲಾಕ್‍ಡೌನ್ ಸಡಿಲಿಸಲಾಗಿದೆ. ಲಾಕ್‍ಡೌನ್ ಸಡಿಲಕ್ಕೆ ಮೊದಲು ನಗರದಲ್ಲಿ ಸೋಂಕಿತರ ಸಂಖ್ಯೆ ಮೂರು ಅಂಕಿ ದಾಟಿರಲಿಲ್ಲ. ಮಾರ್ಚ್ ತಿಂಗಳಿಂದ ಈವರೆಗೆ 1,300 ಪ್ರಕರಣಗಳು, ಏಳೆಂಟು ದಿನಗಳಲ್ಲಿ 4 ಸಾವಿರಕ್ಕೆ ಏರಿಕೆಯಾಗಿದೆ. ಕೊರೋನ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಪ್ರಕರಣಗಳು ಹೆಚ್ಚಿವೆ. ಸಾವಿನ ಪ್ರಮಾಣ ಕಡಿಮೆ ಮಾಡುವುದು ನಮ್ಮ ಮುಖ್ಯ ಉದ್ದೇಶ. ಇತರೆ ಮಹಾನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಸಾರ್ವಜನಿಕರ ಪ್ರಾಣ ರಕ್ಷಣೆ ಸರಕಾರದ ಪ್ರಮುಖ ಆದ್ಯತೆ ಎಂದು ಅವರು ತಿಳಿಸಿದರು.

'ಕೆಪಿಸಿಸಿ ನೂತನ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ದಯನೀಯ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ರಾಜ್ಯ ಪ್ರವಾಸ ಕೈಗೊಳ್ಳಲಿ. ಆ ಮೂಲಕ ಪಕ್ಷವನ್ನು ಬಲಗೊಳಿಸಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷವು ಸದೃಢವಾಗಿದ್ದರೆ ಸರಕಾರವೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಅಧ್ಯಕ್ಷರಾಗಿರುವ ಡಿ.ಕೆ.ಶಿ.ಯವರಿಗೆ ಶುಭವಾಗಲಿ'
-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News