ಕಾಂಗ್ರೆಸ್ ಅನ್ನು ಕೇಡರ್ ಆಧಾರಿತ ಪಕ್ಷವಾಗಿ ಪರಿವರ್ತಿಸುವ ಸಂಕಲ್ಪ: ಡಿ.ಕೆ.ಶಿವಕುಮಾರ್

Update: 2020-07-02 18:05 GMT

ಬೆಂಗಳೂರು, ಜು.2: ಕಾಂಗ್ರೆಸ್ ಪಕ್ಷವನ್ನು ಮಾಸ್ ಬೇಸ್ ನಿಂದ ಕೇಡರ್ ಬೇಸ್ ಪಾರ್ಟಿಯಾಗಿ ಪರಿವರ್ತಿಸಬೇಕಿದೆ. ಯಾವುದೇ ನಾಯಕನಾದರೂ ಆತ ತನ್ನ ಬೂತ್ ಮಟ್ಟದಿಂದ ಪ್ರತಿನಿಧಿಸಬೇಕು. ಇದಕ್ಕೆ ಕೇರಳ ಮಾದರಿ ನಮಗೆ ಪ್ರೇರಣೆ. ನಾವೆಲ್ಲರೂ ಸೇರಿ ಎಲ್ಲರಿಗೂ ಸ್ಥಾನಮಾನ ಸಿಗುವಂತೆ ಕಾರ್ಯಕ್ರಮ ರೂಪಿಸೋಣ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ನೂತನ ಕಚೇರಿಯಲ್ಲಿ ಆಯೋಜಿಸಿದ್ದ ನೂತನ ಅಧ್ಯಕ್ಷ, ಕಾರ್ಯಾಧ್ಯಕ್ಷರ ಅಧಿಕಾರ ಸ್ವೀಕಾರ “ಪ್ರತಿಜ್ಞಾ ದಿನ” ಕಾರ್ಯಕ್ರಮದಲ್ಲಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, ನನ್ನ ಪಾಲಿಗೆ ಇದೊಂದು ಐತಿಹಾಸಿಕ ದಿನ. ರಾಜ್ಯದ ಎಲ್ಲ ಕಾಂಗ್ರೆಸ್ಸಿಗರಿಗೆ, ಕನ್ನಡ ನಾಡಿನ ಜನರಿಗೆ ಇದೊಂದು ವಿಶೇಷ ದಿನ ಎಂದರು.

ನಮ್ಮ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ವೇಣುಗೋಪಾಲ್ ಜತೆ ಸುದೀರ್ಘ ಚರ್ಚೆ ಮಾಡಿ, ರಾಜ್ಯದ ಎಲ್ಲ ನಾಯಕರ ಬಳಿ ಸಲಹೆ ಪಡೆದು ನನಗೆ ಈ ಜವಾಬ್ದಾರಿಯನ್ನು ಕೊಟ್ಟು ನಿಮ್ಮ ಮುಂದೆ ನಿಲ್ಲಿಸಿದ್ದಾರೆ. ನನಗೆ ಅಧ್ಯಕ್ಷ ಸ್ಥಾನದ ಹಂಬಲ ಇಲ್ಲ. ಆದರೆ ಸವಾಲು ಎದುರಿಸಲು ಉತ್ಸಾಹವಿದೆ ಎಂದು ಶಿವಕುಮಾರ್ ಹೇಳಿದರು.

ಡಿ.ಕೆ.ಶಿವಕುಮಾರ್ ರಾಜಕೀಯ ಬದುಕು ಮುಗಿಯಿತು. ಬಿಜೆಪಿಯವರು ಕುತಂತ್ರ ಮಾಡಿ ಶಿವಕುಮಾರ್ ಮತ್ತು ಅವರ ಕುಟುಂಬಕ್ಕೆ ನೀಡುತ್ತಿರುವ ಕಿರುಕುಳಕ್ಕೆ ಅವರ ರಾಜಕೀಯ ಅಂತ್ಯವಾಯಿತು ಎನ್ನುವ ಮಾತು ಕೇಳಿಬಂದಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ, ತಿಹಾರ್ ಜೈಲಿಗೆ ಬಂದು ನನ್ನನ್ನು ತಮ್ಮ ಸಹೋದರನಂತೆ ಕಂಡು, ಒಂದು ಗಂಟೆಗಳ ಕಾಲ ಧೈರ್ಯ ತುಂಬಿದರು. ಈಗ ನನ್ನನ್ನು ಈ ಸ್ಥಾನದಲ್ಲಿ ನಿಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು.

ನಾನು ಅಧ್ಯಕ್ಷನಾದರೂ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ. ನಾನು ವೈಯಕ್ತಿಕ ನಾಯಕತ್ವಕ್ಕಿಂತ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟವನು. ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂಬುದನ್ನು ನಂಬಿದ್ದೇನೆ. ಬಂಗಾರಪ್ಪ, ಎಸ್.ಎಂ ಕೃಷ್ಣ, ಧರಂ ಸಿಂಗ್, ಸಿದ್ದರಾಮಯ್ಯ ಜೊತೆ ಕೆಲಸ ಮಾಡಿದ್ದೇನೆ. ರಾಹುಲ್ ಗಾಂಧಿ ಆದೇಶದ ಮೇರೆಗೆ ಕುಮಾರಸ್ವಾಮಿ ಸಂಪುಟದಲ್ಲೂ ಕೆಲಸ ಮಾಡಿದ್ದೇನೆ. ಆದರೆ ನಾನು ಯಾರಿಗೂ ದ್ರೋಹ ಬಗೆದಿಲ್ಲ ಎಂದು ಶಿವಕುಮಾರ್ ಹೇಳಿದರು.

ನಾನು ಹಲವು ತೊಂದರೆ ಅನುಭವಿಸಿದ್ದೇನೆ. ಎಲ್ಲವೂ ಪಕ್ಷಕ್ಕೊಸ್ಕರ. ನಾನು ಯಾರಿಗಾದರೂ ಅನ್ಯಾಯ ಮಾಡಿದ್ದರೆ ಶಿಕ್ಷೆ ಸ್ವೀಕರಿಸಲು ಸಿದ್ಧ. ನನಗೆ ಅಧಿಕಾರ ಕೊಡದಿದ್ದಾಗಲೂ ಪಕ್ಷದ ಬಗ್ಗೆ ಚಕಾರ ಎತ್ತಲಿಲ್ಲ. ಇದೇ ನನ್ನ ಬದ್ಧತೆ. ಐದು ಬೆರಳು ಸೇರಿದರೆ ಮಾತ್ರ ಹಸ್ತ. ಎನ್‍ಎಸ್‍ಯುಐ, ಮಹಿಳಾ ಕಾಂಗ್ರೆಸ್, ಸೇವಾದಳ, ಯುವ ಕಾಂಗ್ರೆಸ್ ಸೇರಿದಂತೆ ಪಕ್ಷದ ಎಲ್ಲ ಘಟಕಗಳನ್ನು, ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. ನಾವು ಹತ್ತು ಮಂದಿ ಸೇರಿ ದಶಜ್ಯೋತಿಯನ್ನು ಹತ್ತು ಬೆರಳುಗಳಿಂದ ಬೆಳಗಿದ್ದೇವೆ. ಇದು ಒಗ್ಗಟ್ಟಿನ ಜ್ಯೋತಿ. ಈ ಎಲ್ಲ ಸಂಘಟನೆಗಳಿಗೆ ನಾವು ಶಕ್ತಿ ನೀಡದಿದ್ದರೆ ಗುರಿ ಸಾಧಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಸಾಮೂಹಿಕ ನಾಯಕತ್ವಕ್ಕೆ ಆದ್ಯತೆ: ನಾನು ಯಾವುದೇ ನಿರ್ಧಾರ ಕೈಗೊಂಡರೂ ಸಾಮೂಹಿಕವಾಗಿ ಚರ್ಚಿಸಿ, ನಂತರ ತೀರ್ಮಾನಿಸುತ್ತೇನೆ. ವೈಯಕ್ತಿಕ ತೀರ್ಮಾನ ಕೈಗೊಳ್ಳುವುದಿಲ್ಲ. ಯಾವುದೇ ಗುಂಪುಗಾರಿಕೆ ಮೇಲೆ ನನಗೆ ನಂಬಿಕೆ ಇಲ್ಲ. ಯಾವುದೇ ಧರ್ಮ, ಜಾತಿ ಬೇಧ-ಭಾವ ನನಗಿಲ್ಲ. ನಾನು ನಂಬುವುದು ಕೇವಲ ಕಾಂಗ್ರೆಸ್ ಧರ್ಮವನ್ನು ಮಾತ್ರ. ಈ ನಿಟ್ಟಿನಲ್ಲಿ ನಾವೆಲ್ಲರು ಹೆಜ್ಜೆ ಹಾಕಬೇಕು ಎಂದು ಶಿವಕುಮಾರ್ ಹೇಳಿದರು.

ನಾವು ವ್ಯಕ್ತಿ ಪೂಜೆ ಬಿಡೋಣ, ಪಕ್ಷ ಪೂಜೆ ಮಾಡೋಣ. ಯಾವ ಹಿಂಬಾಲಕರೂ ನನಗೆ ಬೇಡ. ನಾವು ನಮ್ಮ ನೆರಳನ್ನೇ ನಂಬಲು ಆಗುಗುವುದಿಲ್ಲ. 20, 30 ವರ್ಷ ತಯಾರು ಮಾಡಿದ ನಾಯಕರು ಏನು ಮಾಡಿದರು ಅಂತಾ ನಾವು ನೋಡಿದ್ದೇವೆ. ಈಗಲೂ ಯಾರಾದರೂ ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ, ಅತ್ಯಂತ ಗೌರವದಿಂದ ಬೀಳ್ಕೊಡುತ್ತೇವೆ. ಆದರೆ, ಯಾವುದೆ ಕಾರಣಕ್ಕೂ ಬ್ಲಾಕ್‍ಮೇಲ್ ರಾಜಕಾರಣಕ್ಕೆ ನಾವು ಬಗ್ಗುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಪಕ್ಷ ಅಧಿಕಾರಕ್ಕೇರಲು ಮೆಟ್ಟಿಲಾಗುವ ಆಸೆ: ನನಗೆ ಯಾರು ಎಷ್ಟೇ ತೊಂದರೆ ಕೊಡಲಿ, ಆಮಿಷ ಒಡ್ಡಲಿ, ಕೇಸ್ ಹಾಕಲಿ, ಜೈಲಿಗೆ ಹಾಕಲಿ ಯಾವುದಕ್ಕೂ ನಾನು ಬೆದರುವುದಿಲ್ಲ. ಈ ಡಿ.ಕೆ.ಶಿವಕುಮಾರ್ ಜಗ್ಗುವ ಮಗ ಅಲ್ಲ. ಕೆಲವರು ನನ್ನನ್ನು ಕನಕಪುರ ಬಂಡೆ ಅಂತಾರೆ. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದು ಅವರು ಹೇಳಿದರು.

ಬಂಡೆಗೆ ಹುಳಿ ಪೆಟ್ಟು ಬಿದ್ದರೆ ಅಡಿಪಾಯದ ಕಲ್ಲಾಗುತ್ತದೆ. ಇನ್ನೂ ಪೆಟ್ಟು ಬಿದ್ದರೆ ಚಪ್ಪಡಿಯಾಗುತ್ತದೆ. ಇನ್ನು ಪೆಟ್ಟು ಬಿದ್ದರೆ ಬಾಗಿಲ ಕಂಬವಾಗುತ್ತದೆ. ಇನ್ನೂ ಪೆಟ್ಟು ಬಿದ್ದರೆ ದೇವರ ಶಿಲೆಯಾಗುತ್ತದೆ. ನಾನು ಶಿಲೆಯಾಗಲು ಬಯಸುವುದಿಲ್ಲ. ಬದಲಿಗೆ ವಿಧಾನಸೌಧದ ಮೆಟ್ಟಿಲ ಕಲ್ಲಾಗುತ್ತೇನೆ. ನೀವು ಆ ಕಲ್ಲಿನ ಮೇಲೆ ನಡೆದುಕೊಂಡು ವಿಧಾನಸೌಧದ ಮೂರನೇ ಮಹಡಿ ತಲುಪಿದರೆ ಸಾಕು. ಅದರಲ್ಲಿ ತೃಪ್ತಿ ಪಡುತ್ತೇನೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದೇ ನನ್ನ ಪ್ರಮುಖ ಗುರಿ ಎಂದು ಶಿವಕುಮಾರ್ ಹೇಳಿದರು.

ಅನೇಕ ನಾಯಕರು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಈ ದೇಶಕ್ಕೆ, ರಾಜ್ಯಕ್ಕೆ ಕಾಂಗ್ರೆಸ್ ಅನಿವಾರ್ಯವಾಗಿದೆ. ಈ ದೇಶದಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ, ಪತ್ರಿಕಾರಂಗದ ಬಗ್ಗೆ ಮಾತನಾಡುತ್ತೇವೆ. ಇವುಗಳನ್ನು ಆಧಾರ ಸ್ತಂಭ ಎನ್ನುತ್ತೇವೆ. ಅದೇ ರೀತಿ ರೈತರು, ಯೋಧರು, ಕಾರ್ಮಿಕರು, ಶಿಕ್ಷಕರು ಈ ದೇಶಕ್ಕೆ ಪ್ರಮುಖ ಸ್ತಂಭಗಳು. ಇಂದು ಅವರ ಪರಿಸ್ಥಿತಿ ಹದಗೆಟ್ಟಿದೆ. ಅವರ ಉದ್ಧಾರಕ್ಕೆ ಶ್ರಮಿಸೋಣ ಎಂದು ಅವರು ಕರೆ ನೀಡಿದರು.

ಕೊರೋನ ಸಂದರ್ಭದಲ್ಲಿ ನಾವು ಮುಕ್ತ ಮನಸ್ಸಿನಿಂದ ಸಂತ್ರಸ್ತರಿಗೆ ಸಹಾಯ ಮಾಡಿದ್ದೇವೆ. ಬೇರೆಯವರು ಕೋವಿಡ್ ವಿಚಾರಕ್ಕೂ ಕೋಮು ಲೇಪ ಹಚ್ಚಿದರು. ರೈತ ಬೆಳೆಯುವ ಅನಕ್ಕೆ ಜಾತಿ ಇದೆಯೆ? ಸಿದ್ದರಾಮಯ್ಯ ಅನ್ನ ಭಾಗ್ಯ ಕೊಟ್ಟರು, ಅದನ್ನು ಒಂದು ಜಾತಿಯವರಿಗೆ ಮಾತ್ರ ಕೊಟ್ಟರೆ? ನೇಕಾರರು ಬಟ್ಟೆ ನೇಯುತ್ತಾರೆ. ಅವರು ಜಾತಿ ಆಧಾರದ ಮೇಲೆ ನೇಯುತ್ತಾರಾ? ಸಂಕಷ್ಟದ ಸಂದರ್ಭದಲ್ಲಿ ನನ್ನ ಕರೆಗೆ 5700 ಎನ್‍ಎಸ್‍ಯು, ಯುವ ಕಾಂಗ್ರೆಸ್ ಕಾರ್ಯಕರ್ತರು ರಕ್ತದಾನ ಮಾಡಿದ್ದಾರೆ. ಅವರು ಕೊಟ್ಟ ರಕ್ತಕ್ಕೆ ಜಾತಿ ಇದೆಯಾ? ನಿರ್ದಿಷ್ಟ ಜಾತಿಯವರ ದೇಹವನ್ನು ಮಾತ್ರ ಆ ರಕ್ತ ಸೇರಿದೆಯಾ? ಎಂದು ಅವರು ಪ್ರಶ್ನಿಸಿದರು.

ರೈತ ಬೆಳೆದ ಬೆಳೆಗಳಿಗೆ ಮಾರುಕಟ್ಟೆ  ಕಲ್ಪಿಸಲು ಮುಖ್ಯಮಂತ್ರಿಗೆ ಸಾಧ್ಯವಾಗಿಲ್ಲ. ನಮ್ಮ ಶಾಸಕರು, ಮುಖಂಡರು 100 ಕೋಟಿ ರೂ. ಮೌಲ್ಯದ ತರಕಾರಿ ಖರೀದಿಸಿ, ಬಡವರಿಗೆ ಹಂಚಿದ್ದಾರೆ. ಕಾರ್ಮಿಕ ಸಮುದಾಯದವರನ್ನು ಈ ಸರಕಾರ ನಡೆಸಿಕೊಂಡ ರೀತಿ ಎಷ್ಟು ಹೀನಾಯವಾಗಿತ್ತು. ಅವರಿಗೆ ಸಮರ್ಪಕ ಹಣ, ಆಹಾರ, ಆರೋಗ್ಯ ಕಿಟ್ ನೀಡಲಾಗಲಿಲ್ಲ. ಬದಲಿಗೆ ಅವರಿಗೆ ನೀಡಬೇಕಾದ ಪರಿಹಾರ ವಸ್ತುಗಳ ಮೇಲೆ ಅವರ ಪಕ್ಷದ, ನಾಯಕರ ಫೋಟೋ ಹಾಕಿಕೊಂಡು ಅವರ ಕಾರ್ಯಕರ್ತರಿಗೆ ಹಂಚಿಕೊಂಡರು ಎಂದು ಬಿಜೆಪಿ ವಿರುದ್ಧ ಅವರು ಕಿಡಿಗಾರಿದರು.

ಕಾರ್ಮಿಕರಿಗೆ ಮಾಸಿಕ  10 ಸಾವಿರ ರೂ.ಕೊಡುವಂತೆ ಕೇಳಿದೆವು. 5 ಸಾವಿರ ರೂ.ಘೋಷಿಸಿದ್ದಾರೆ. ಆದರೆ, ಈವರೆಗೂ ಅದನ್ನೂ ನೀಡಿಲ್ಲ. ಅವರು ಸತ್ತ ಮೇಲೆ ಪರಿಹಾರ ಕೊಡುತ್ತೀರಾ? ದಾಖಲೆ ಅಂತಾ ಇಲ್ಲದ ಗೊಂದಲ ಸೃಷ್ಟಿಸಿ ಅವರಿಗೆ ಪರಿಹಾರ ಸಿಗದಂತೆ ಮಾಡಿದ್ದೀರಿ. ಇದರ ವಿರುದ್ಧ ಧ್ವನಿ ಎತ್ತಲು ನಾವಿದ್ದೇವೆ. ಬಿಜೆಪಿ ಮುಕ್ತ ರಾಜ್ಯ ಮಾಡಲು ನಾವೆಲ್ಲ ಪ್ರತಿಜ್ಞೆ ಮಾಡಬೇಕಿದೆ. ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಎಂಬ ತತ್ವದ ಮೇಲೆ ನಾವು ಸಾಗೋಣ ಎಂದು ಶಿವಕುಮಾರ್ ಹೇಳಿದರು.

ಸೋನಿಯಾ ಗಾಂಧಿ: ಇಂತಹ ಪರಿಸ್ಥಿತಿಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ಪಕ್ಷದ ಕಾರ್ಯಕರ್ತರು ಹಾಗೂ ನಾಯಕರನ್ನು ತಂತ್ರಜ್ಞಾನದ ಮೂಲಕ ಸಂಘಟಿಸುತ್ತಿರುವ ಪ್ರಯತ್ನದಿಂದ ಸಂತೋಷವಾಗಿದೆ. ಕಾಂಗ್ರೆಸ್ ಪಕ್ಷವು ಸಂವಿಧಾನದ ತತ್ವಗಳನ್ನು ಎತ್ತಿ ಹಿಡಿದು, ಉತ್ತಮ ಸಮಾಜಕ್ಕಾಗಿ ಜನರ ಆಂದೋಲನವಾಗಿದೆ. ಸದ್ಯ ಕರ್ನಾಟಕ ಸೇರಿದಂತೆ ದೇಶ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಮೂಲಕ ಪಕ್ಷದ ಸಿದ್ಧಾಂತವನ್ನು ಎತ್ತಿ ಹಿಡಿಯಬೇಕಿದೆ. ಶಿವಕುಮಾರ್ ನೇತೃತ್ವದಲ್ಲಿ ಕೆಪಿಸಿಸಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದೆ. ಸರಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲಿದೆ ಎಂಬ ನಂಬಿಕೆ ಇದೆ ಎಂದು ಸೋನಿಯಾಗಾಂಧಿ ಕಳುಹಿಸಿದ್ದ ಪತ್ರವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಓದಿದರು. ರಾಹುಲ್‍ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕಾರ್ಯಕ್ರಮದ ಸಂದರ್ಭದಲ್ಲೆ ದೂರವಾಣಿ ಕರೆ ಮಾಡಿ ಡಿ.ಕೆ.ಶಿವಕುಮಾರ್ ರಿಗೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರದ ಮಾಜಿ ಸಚಿವರಾದ ಎಂ.ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ಡಾ.ಕೆ.ರಹ್ಮಾನ್‍ಖಾನ್, ತಮಿಳುನಾಡು,ಆಂಧ್ರಪ್ರದೇಶದ ಕಾಂಗ್ರೆಸ್‍ ಸಮಿತಿ ಅಧ್ಯಕ್ಷರು, ತೆಲಂಗಾಣ ರಾಜ್ಯದ ವಿರೋಧ ಪಕ್ಷದ ನಾಯಕ, ಮಾಜಿ ಸಚಿವರು, ಮಾಜಿ ಕೆಪಿಸಿಸಿ ಅಧ್ಯಕ್ಷರು ,ಶಾಸಕರು, ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.

ಕೆಪಿಸಿಸಿ ನಿರ್ಗಮಿತ ಅಧ್ಯಕ್ಷ ದಿನೇಶ್ ಗುಂಡೂರಾವ್, ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಡಿಕೆಶಿ ವಿರುದ್ಧದ ರಾಜಕೀಯ ಪಿತೂರಿ ನೋಡಿದ್ದೇವೆ: ಪ್ರಿಯಾಂಕಾ ಗಾಂಧಿ
ಡಿ.ಕೆ.ಶಿವಕುಮಾರ್ ವಿರುದ್ಧ ವೈಯಕ್ತಿಕವಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ರಾಜಕೀಯ ಪಿತೂರಿ ನಡೆದಿರುವುದನ್ನು ನಾವು ನೋಡಿದ್ದೇವೆ. ಇದನ್ನು ಅವರು ಬಹಳ ಧೈರ್ಯದಿಂದ ಎದುರಿಸಿ ಕಠಿಣ ಪರಿಸ್ಥಿತಿಯಲ್ಲಿ ಅವರು ಪಕ್ಷದ ಪರವಾಗಿಯೆ ನಿಂತು ತಮ್ಮ ನಿಷ್ಠೆ ತೋರಿದ್ದಾರೆ. ಇದು ಸವಾಲು ಎದುರಿಸುವ ಇತರೆ ಎಲ್ಲ ಕಾಂಗ್ರೆಸ್ಸಿಗರಿಗೂ ಮಾದರಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು, ನಮ್ಮ ಸಿದ್ಧಾಂತ ಕಾಪಾಡಲು, ಸತ್ಯವನ್ನು ಎತ್ತಿ ಹಿಡಿಯಲು, ಸರಕಾರದ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಮುಂದೆ ಸಾಗಬೇಕು. ಇದಕ್ಕೆ ಎಲ್ಲರೂ ಸಹಕರಿಸುತ್ತಾರೆ ಎಂದು ಭಾವಿಸಿ, ಎಲ್ಲರಿಗೂ ಶುಭ ಕೋರುತ್ತೇನೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಿಳಿಸಿದರು.
 
ಪ್ರತಿಯೊಬ್ಬರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿ: ರಾಹುಲ್ ಗಾಂಧಿ
ಡಿ.ಕೆ.ಶಿವಕುಮಾರ್ ಕೋವಿಡ್ ಹಾಗೂ ಆರ್ಥಿಕ ಬಿಕ್ಕಟ್ಟಿನಂತಹ ಸಂಕಷ್ಟದ ಸಮಯದಲ್ಲಿ ಕರ್ನಾಟಕದ ಜನರ ಹಿತಾಸಕ್ತಿಗೆ ಬದ್ಧರಾಗಿ, ಅದರಲ್ಲೂ ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ಕೆಲಸ ಮಾಡಲಿದ್ದಾರೆ ಎಂದು ಭಾವಿಸುತ್ತೇನೆ. ಪಕ್ಷದ ಯಶಸ್ಸಿಗಾಗಿ ಎಲ್ಲರೂ ಶ್ರಮಿಸಬೇಕು. ಡಿ.ಕೆ.ಶಿವಕುಮಾರ್ ಪ್ರತಿಯೊಬ್ಬ ಕಾಂಗ್ರೆಸಿಗನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕಿದ್ದು, ಅವರು ಅದನ್ನು ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಶುಭ ಕೋರಿದರು.

ಪ್ರತಿಜ್ಞಾ ದಿನದ ಕಾರ್ಯಕ್ರಮದ ವೈಶಿಷ್ಟತೆಗಳು

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್ ಹಾಗೂ ಸತೀಶ್ ಜಾರಕಿಹೊಳಿ ಅಧಿಕಾರ ಸ್ವೀಕರಿಸಿದ ‘ಪ್ರತಿಜ್ಞಾ’ ಕಾರ್ಯಕ್ರಮವು ಹಲವು ವೈಶಿಷ್ಟತೆಗಳಿಗೆ ಕಾರಣವಾಯಿತು.

ಅಧಿಕಾರ ಸ್ವೀಕರಿಸುವ ಮುನ್ನ ಇತ್ತೀಚೆಗೆ ಭಾರತ-ಚೀನಾ ಗಡಿಯಲ್ಲಿ ಹುತಾತ್ಮರಾದ ನಮ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಜ್ಯಸಭೆಯ ಮಾಜಿ ಉಪಸಭಾಪತಿ ಡಾ.ಕೆ.ರಹ್ಮಾನ್ ಖಾನ್ ಎಲ್ಲರಿಗೂ ಭಾರತ ಸಂವಿಧಾನ ಪೀಠಿಕೆ ಬೋಧಿಸಿದರೆ, ಡಿ.ಕೆ.ಶಿವಕುಮಾರ್ ಎಲ್ಲ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರತಿಜ್ಞೆ ಬೋಧಿಸಿದರು.

ಝೂಮ್, ಟ್ವಿಟರ್, ಫೇಸ್‍ಬುಕ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳು, ಸುದ್ದಿ ಮಾಧ್ಯಮಗಳ ಮೂಲಕ ರಾಜ್ಯ, ದೇಶ ಅಷ್ಟೇ ಅಲ್ಲದೆ, ವಿದೇಶಗಳಲ್ಲಿಯೂ ಸುಮಾರು 80 ಲಕ್ಷ ಮಂದಿ ಪ್ರತಿಜ್ಞಾ ದಿನದ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ ಎಂದು ಕೆಪಿಸಿಸಿ ತಿಳಿಸಿದೆ. ಕರ್ನಾಟಕದಲ್ಲಿ ಸುಮಾರು 14,600 ಸ್ಥಳಗಳಲ್ಲಿ ಝೂಮ್ ಆಪ್ ಮೂಲಕ 20 ಲಕ್ಷಕ್ಕೂ ಹೆಚ್ಚು ಮಂದಿ ನೇರವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೇವಲ ಅರ್ಧಗಂಟೆಯಲ್ಲಿ 76763 66666 ಮೊಬೈಲ್ ಸಂಖ್ಯೆಗೆ 6 ಲಕ್ಷಕ್ಕೂ ಅಧಿಕ ಮಂದಿ ಮಿಸ್‍ಕಾಲ್ ನೀಡುವ ಮೂಲಕ ಕಾರ್ಯಕ್ರಮವನ್ನು ಬೆಂಬಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News