ಡಿ.ಕೆ.ಶಿವಕುಮಾರ್ ಡೈನಾಮಿಕ್, ಆದರೆ, ಎಲ್ಲವನ್ನೂ ಅವರೊಬ್ಬರೇ ಮಾಡಲು ಸಾಧ್ಯವಿಲ್ಲ: ಕೆ.ಸಿ.ವೇಣುಗೋಪಾಲ್

Update: 2020-07-02 15:11 GMT

ಬೆಂಗಳೂರು, ಜು. 2: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿರುವ ಡಿ.ಕೆ.ಶಿವಕುಮಾರ್ ಅವರು ಡೈನಾಮಿಕ್. ಆದರೆ, ಅವರೊಬ್ಬರೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗದುಕೊಂಡು ಮುನ್ನಡೆಯಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಇಂದಿಲ್ಲಿ ಸಲಹೆ ಮಾಡಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಡಿ.ಕೆ.ಶಿ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸವಾಲುಗಳನ್ನು ಎದುರಿಸಿ, ಪಕ್ಷವನ್ನು ಮುನ್ನಡೆಸಲು ಡಿ.ಕೆ.ಶಿವಕುಮಾರ್ ಅವರು ಸೂಕ್ತ ವ್ಯಕ್ತಿ ಎನ್ನುವುದು ನನಗೆ ಅರಿವಿದೆ. ಎನ್‍ಎಸ್‍ಯುಐನಿಂದ ನಿರಂತರ ಹೋರಾಟ ಮಾಡುತ್ತ ಅವರು ಪಕ್ಷದ ಅಧ್ಯಕ್ಷ ಹುದ್ದೆಯ ಈ ಹಂತಕ್ಕೆ ಬಂದು ನಿಂತಿದ್ದಾರೆ.

ಅವರು ಡೈನಾಮಿಕ್ ಲೀಡರ್ ಆಗಿದ್ದಾರೆ. ಅನೇಕ ಯೋಜನೆಗಳನ್ನು ಹಾಕಿ ಪಕ್ಷ ಮುನ್ನಡೆಸುವ ನಡೆಸುವ ಚಾಣಾಕ್ಷತೆ ಹೊಂದಿದ್ದಾರೆ. ಏನೇ ಸವಾಲು ಎದುರದರೂ ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಅವರಿಗಿದೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಇಲ್ಲಿ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಯಶಸ್ವಿಯಾಗಲು ಸಾಧ್ಯವಿದೆ ಎಂದು ಹೇಳಿದರು.

ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಶಿವಕುಮಾರ್ ಅವರು ಎಲ್ಲವನ್ನು ಎದುರಿಸಿ ಪಕ್ಷದ ಪರವಾಗಿ ನಿಂತವರು. ಪಕ್ಷ ನಿಷ್ಠೆಯೇ ಅವರಿಗೆ ಶ್ರೀರಕ್ಷೆ. ರಾಜ್ಯದಲ್ಲಿ ಅನೇಕ ನಾಯಕರು ಅಧಿಕಾರ ಅನುಭವಿಸಿ ಪಕ್ಷ ತೊರೆದಿದ್ದಾರೆ. ಆದರೆ, ಅವರು ಅಧಿಕಾರ ವಂಚಿತರಾಗಿದ್ದಾಗಲೂ, ಪಕ್ಷದ ಪರವಾಗಿ ನಿಂತಿದ್ದಾರೆ. ರಾಷ್ಟ್ರ ಮಟ್ಟದಲ್ಲಿಯೂ ಅವರು ಬಂಡೆಯಂತೆ ನಿಂತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿರುವ ಈಶ್ವರ್ ಖಂಡ್ರೆ ರಾಜ್ಯದ ಭವಿಷ್ಯದ ನಾಯಕರಾಗುವುದರಲ್ಲಿ ಸಂದೇಹವಿಲ್ಲ. ಸತೀಶ್ ಜಾರಕಿಹೊಳಿ ಎಲ್ಲೇ ಹೋದರು ಫಲಿತಾಂಶ ನಿಶ್ಚಿತ. ಅವರು ಕೇವಲ ಬೆಳಗಾವಿ ರಾಜಕಾರಣಕ್ಕೆ ಮೀಸಲಾಗದೆ ರಾಜ್ಯ ಪ್ರವಾಸ ಮಾಡಬೇಕು. ಸಲೀಂ ಅಹ್ಮದ್ ಅವರು ಕೂಡ ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಬೆಳೆಯುವ ಎಲ್ಲ ಅವಕಾಶಗಳಿವೆ ಎಂದರು.

ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯನವರ ನಂತರ ನಾಯಕರು ಇಲ್ಲಿದ್ದಾರೆ. ಅವರ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ನಿಜಕ್ಕೂ ಸುವರ್ಣಯುಗವೇ ಆಗಿತ್ತು. ತಳ ಸಮುದಾಯದ ಜನರ ಪರವಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಇಲ್ಲಿದ್ದಾರೆ ಎಂದ ಅವರು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಕೊರೋನ ಸಂಕಷ್ಟದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ತಂತ್ರಜ್ಞಾನದ ಸಂಪೂರ್ಣ ಸದುಪಯೋಗ ಪಡೆಸಿಕೊಳ್ಳುವ ಮೂಲಕ ಹೊಸ ರೀತಿಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದ್ದಾರೆಂದ ಅವರು, ದೇಶ ತೀರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಆರ್ಥಿಕವಾಗಿ ದೇಶ ಸಂಕಷ್ಟದಲ್ಲಿದೆ. ಕೊರೋನ ಸಂದರ್ಭದಲ್ಲಿ. ಕೆಪಿಸಿಸಿ ತೊಂದರೆಗೊಳಗಾದ ಜನರಿಗೆ ಸಹಾಯ ಹಸ್ತ ಚಾಚಿರುವುದು ಮೆಚ್ಚುಗೆಗೆ ಕಾರಣವಾಗಿದೆ. ಡಿ.ಕೆ.ಶಿವಕುಮಾರ್ ಅವರೊಂದಿಗೆ ಪಕ್ಷ ಇದೆ. ಹೈ ಕಮಾಂಡ್ ಅವರಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News