ಮೈತ್ರಿ ಸಹವಾಸವೇ ಬೇಡ: ದಿನೇಶ್ ಗುಂಡೂರಾವ್

Update: 2020-07-02 15:13 GMT

ಬೆಂಗಳೂರು, ಜು. 2: ಮುಂದಿನ ದಿನಗಳಲ್ಲಿ ಜಾತ್ಯತೀತ ಜನತಾ ದಳ(ಜೆಡಿಎಸ್) ಸೇರಿದಂತೆ ಬೇರೆ ಪಕ್ಷಗಳೊಂದಿಗೆ ಯಾವುದೇ ಕಾರಣಕ್ಕೂ ಮೈತ್ರಿ ಬೇಡ. ಮುಂದೆ ಎಂದೂ ಮೈತ್ರಿ ಸಹವಾಸಕ್ಕೆ ಹೊಗದೆ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸಿ, ಹೋರಾಟ ಮಾಡಬೇಕು ಎಂದು ಕೆಪಿಸಿಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲಹೆ ಮಾಡಿದ್ದಾರೆ.

ಗುರುವಾರ ಪದಗ್ರಹಣ ಸಮಾರಂಭದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿ ಮಾತನಾಡಿದ ಅವರು, ನಾನು ಈಗಾಗಲೇ ಅಧಿಕಾರ ಹಸ್ತಾಂತರ ಮಾಡಿ 7 ತಿಂಗಳುಗಳಾಗಿವೆ. ಏಕೆಂದರೆ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ 7 ತಿಂಗಳು ಕಳೆದಿದೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿತ್ತು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆಯಲ್ಲಿ ನಾವು ಹೀನಾಯ ಸೋಲು ಕಂಡಿದೇವೆ ಎಂದರು

ಈ ಹಿಂದೆ ಸಿದ್ದರಾಮಯ್ಯನವರು ಲೋಕಸಭೆ ಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧಿಸೋಣ ಎಂಬ ಸಲಹೆ ಮಾಡಿದ್ದರು. ಆದರೂ ಪಕ್ಷದ ವರಿಷ್ಟರ ತೀರ್ಮಾನದಂತೆ ನಾವು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದೇವೆ. ಚುನಾವಣೆಯಲ್ಲಿ ನಾವು ಹೀನಾಯವಾಗಿ ಸೋಲು ಕಂಡಿದ್ದೇವೆ. ಮೈತ್ರಿ ಸಹವಾಸದಿಂದಲೇ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದೆ ಎಂದರು.

ಸಂಕಷ್ಟದ ಪರಿಸ್ಥಿತಿಯಲ್ಲಿ ನಾನು ಪಕ್ಷದ ಅಧ್ಯಕ್ಷನಾಗಿದ್ದೆ. ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದೇನೆ. ಲೋಕಸಭೆ ಹಾಗೂ ಉಪ ಚುನಾವಣೆ ಸೋಲಿನಿಂದ ರಾಜೀನಾಮೆ ಕೊಡಲು ತೀರ್ಮಾನಿಸಿದೆ. ಪಕ್ಷ ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡಿದ್ದು ಸೂಕ್ತವಾಗಿದೆ. ಅವರಿಗೆ ಛಲ ಇದೆ, ನಿಶ್ಚಿತ ಗುರಿ ಇದೆ. ಅವರು ಬಯಸಿದ್ದನ್ನು ಮಾಡುತ್ತಾರೆ. ಡಿಕೆಶಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಮ್ಮ ಮುಂದಿನ ಗುರಿ ಏಕಾಂಗಿಯಾಗಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News