ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್-19 ಹಾಸಿಗೆ ಮೀಸಲು: ಸಚಿವ ಡಾ. ಸುಧಾಕರ್

Update: 2020-07-02 17:36 GMT

ಬೆಂಗಳೂರು, ಜು.2: ರಾಜ್ಯದಲ್ಲಿ ಕೋವಿಡ್-19 ಪೀಡಿತರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಸೋಂಕಿತರಿಗಾಗಿ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿಡಲು ಒಪ್ಪಿಕೊಂಡಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಹಂಚಿಕೆಗೆ ಸಮರ್ಪಕ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ನೂತನ ಮಾರ್ಗಸೂಚಿಗಳನ್ನು ನಾಳೆಯೇ ಬಿಡುಗಡೆಗೊಳಿಸಲಾಗುವುದೆಂದು ತಿಳಿಸಿದರು.

ಗದುಗಿನ ಮೆಡಿಕಲ್ ಕಾಲೇಜಿನಲ್ಲಿ ರಾಜ್ಯದ 79ನೇ ಕೋವಿಡ್ ಪ್ರಯೋಗಾಲಯಕ್ಕೆ ಆನ್‍ಲೈನ್ ಮೂಲಕ ಚಾಲನೆ ನೀಡಿದ ಅವರು, ಗದುಗಿನ ವೈದ್ಯಕೀಯ ಕಾಲೇಜು ಇಡೀ ರಾಜ್ಯವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದೆ. ಪ್ರಾರಂಭವಾದ ಐದು ವರ್ಷಕ್ಕೂ ಮುನ್ನವೇ ಪಿಜಿ ಕೋರ್ಸ್‍ಗಳನ್ನೂ ಆರಂಭಿಸಲು ಅನುಮತಿ ಪಡೆದ ದೇಶದಲ್ಲೇ ಮೊದಲ ಮೆಡಿಕಲ್ ಕಾಲೇಜು ಇದಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 44 ಸರಕಾರಿ ಹಾಗೂ 35 ಖಾಸಗಿ ಲ್ಯಾಬ್‍ಗಳು ಕೆಲಸ ಮಾಡುತ್ತಿವೆ. ದಿನವೊಂದಕ್ಕೆ 15ಸಾವಿರ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಇದುವರೆಗೆ ಸುಮಾರು ಐದೂವರೆ ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹಾಗೂ ರೋಗ ಲಕ್ಷಣ ರಹಿತ ಸೋಂಕಿತರನ್ನು ಪತ್ತೆ ಹಚ್ಚಲು 1.5ಕೋಟಿ ಮನೆಗಳನ್ನು ಹಾಗೂ ದೂರವಾಣಿ ಸಮೀಕ್ಷೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಗದುಗಿನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್, ಮಾಜಿ ಸಚಿವ ಶಿವಕುಮಾರ್ ಉದಾಸಿ, ಗದ್ದಿಗೌಡರ್, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News