ವಿಧಾನ ಪರಿಷತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ: ಜೆಡಿಯು ಅಭ್ಯರ್ಥಿಯಾಗಿ ಚಂದ್ರಶೇಖರ ಆಯ್ಕೆ

Update: 2020-07-02 18:15 GMT

ಬೆಂಗಳೂರು, ಜು.2: ರಾಜ್ಯದಲ್ಲಿ ಮುಂಬರುವ ವಿಧಾನ ಷರಿಷತ್ ಚುನಾವಣೆಗೆ ಶಿಕ್ಷಕರ ಕ್ಷೇತ್ರದ ಸಂಯುಕ್ತ ಜನತಾ ದಳ (ಜೆಡಿಯು) ಪಕ್ಷದ ಅಭ್ಯರ್ಥಿಯಾಗಿ ಚಂದ್ರಶೇಖರ ವಿ. ಸ್ಥಾವರಮಠ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮಹಿಮ ಜೆ.ಪಟೇಲ್ ತಿಳಿಸಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆ ರಾಜ್ಯದಲ್ಲಿ ನಡೆಯಬೇಕಿದ್ದ ವಿಧಾನ ಪರಿಷತ್ ಚುನಾವಣೆಯನ್ನು ಮುಂದೂಡುವ ಸಾಧ್ಯತೆ ಇದೆ. ಆದ್ದರಿಂದ ಜೆಡಿಯು ಪಕ್ಷವನ್ನು ಸಕ್ರಿಯಗೊಳಿಸುವ ಉದ್ದೇಶದಿಂದ ಶಿಕ್ಷಣಕ್ಷೇತ್ರಕ್ಕೆ ಪಕ್ಷದ ವಕ್ತಾರ ಚಂದ್ರಶೇಖರ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ ಎಂದರು.

ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಯುತ್ತಿದ್ದು ಪಕ್ಷವನ್ನು ಬಲಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ. ಅಲ್ಲದೆ ಆಗ್ನೇಯ ಪದವೀಧರ ಕ್ಷೇತ್ರಕ್ಕೂ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದ ಅವರು, ಎಲ್ಲವನ್ನೂ ಕಲಿಯಬೇಕೆಂಬ ಹಂಬಲವೇ ಶಿಕ್ಷಣ. ಆದರೆ ಶಿಕ್ಷಣ ಇಂದು ವ್ಯಾಪಾರವಾಗಿದ್ದು ಉದ್ಯೋಗ ಪಡೆಯಲು ಮಾತ್ರ ಸೀಮಿತವಾಗಿದೆ. ಜೀವನ ಪಾಠಗಳನ್ನು ಶಿಕ್ಷಣದಲ್ಲಿ ಅಳವಡಿಸಬೇಕಿದೆ ಎಂದು ನುಡಿದರು.

ಈ ವೇಳೆ ಜೆಡಿಯು ಪಕ್ಷದ ಪ್ರಧಾನ ಕಾರ್ಯದರ್ಶಿ ದಾವೂದ್ ಖಾನ್, ರಾಜ್ಯ ಮಹಿಳಾ ಘಟಕದ ಸಂಚಾಲಕಿ ಭವ್ಯಾ ವಿಶ್ವನಾಥ್, ಬೆಂ.ನಗರ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ, ಪಕ್ಷದ ವಕ್ತಾರ ಚಂದ್ರಶೇಖರ್ ಸ್ಥಾವರ ಮಠ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News