ಆದಾಯ ರಹಿತರಿಗೆ ಮಾಸಿಕ 7500ರೂ. ನೀಡಿ: ಬಾಲಕೃಷ್ಣ ಶೆಟ್ಟಿ

Update: 2020-07-03 10:40 GMT

ಉಡುಪಿ, ಜು.3: ಕೊರೋನ ಲಾಕ್‌ಡೌನ್ ಪರಿಣಾಮವಾಗಿ ಇಂದು ಎಲ್ಲ ಉದ್ಯಮಗಳು ನಷ್ಟದಲ್ಲಿವೆ. ಜನರಿಗೆ ಯಾವುದೇ ಆದಾಯ ಇಲ್ಲವಾಗಿದೆ. ಆದುದರಿಂದ ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಜನರಿಗೆ ಆರು ತಿಂಗಳು ಮಾಸಿಕ 7500ರೂ. ನೇರ ನಗದು ವರ್ಗಾವಣೆ ಮಾಡಬೇಕು ಎಂದು ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ಅಶ್ವಥಕಟ್ಟೆ ಎದುರು ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಕೊರೋನ ಮುಂಚೂಣಿಯಲ್ಲಿರುವ ವಾರಿಯರ್ಸ್‌ಗಳನ್ನು ಖಾಯಂಗೊಳಿಸಿ, ಸಂರಕ್ಷಿಸಬೇಕು. ಯೋಜನಾ ನೌಕರರಿಗೆ ಕೊರೋನ ಕೆಲಸದ ಪ್ರೋತ್ಸಾಹಧನವನ್ನು ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳಿಗೆ ನಗರಗಳಿಗೂ ವಿಸ್ತರಿಸಿ, ವಲಸೆ ಕಾರ್ಮಿಕರಿಗೂ ಅನ್ವಯವಾಗುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಲಾಕ್‌ಡೌನ್ ಸಂದರ್ಭದ ವೇತನವನ್ನು ಸಂಪೂರ್ಣ ಪಾವತಿಸಿ, ಪೂರ್ಣ ವೇತನದೊಂದಿಗೆ ಕೆಲಸ ಕೊಡಬೇಕು. ಎಲ್ಲ ಕಾರ್ಮಿಕರಿಗೆ ಕನಿಷ್ಠ ಆರು ತಿಂಗಳ ವರೆಗೆ ಪಡಿತರ ಒದಗಿಸಬೇಕು. ಕೋವಿಡ್-19ನ್ನು ವೈದ್ಯಕೀಯ ತುರ್ತು ಸ್ಥಿತಿ ಎಂಬುದಾಗಿ ಪರಿಗಣಿಸಬೇಕೆ ಹೊರತು ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗಿ ಅಲ್ಲ. ಖಾಸಗೀಕರಣದ ಕ್ರಮಗಳನ್ನು ಕೈಬಿಡಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2020ನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆ ಮತ್ತು ಕೇಂದ್ರ ಸರಕಾರಿ ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರವನ್ನು ಪುನರ್ ನೀಡಬೇಕು. ಕಾರ್ಮಿಕ ಕಾನೂನುಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು. ಬಸ್ ನೌಕರರು, ಬೀಡಿ ಕಾರ್ಮಿಕರು, ಟೈಲರರು, ಬೀದಿಬದಿ ವ್ಯಾಪಾರಿಗಳು, ಹೊಟೇಲು ಕಾರ್ಮಿಕರು ಮತ್ತಿತ್ತರ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ನೀಡಬೇಕು. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹಿಂತೆಗೆಯಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.

ಧರಣಿಯಲ್ಲಿ ಎಐಟಿಯುಸಿ ಮುಖಂಡರಾದ ಕೆ.ವಿ.ಭಟ್, ಸಂಜೀವ, ಸಿಐಟಿಯು ಮುಖಂಡರಾದ ಶಶಿಧರ ಗೊಲ್ಲ. ಉಮೇಶ್ ಕುಂದರ್, ಕವಿರಾಜ್ ಎಸ್., ನಳಿನಿ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News