ಅತಿಥಿ ಉಪನ್ಯಾಸಕರ ಸಂಕಷ್ಟಕ್ಕೆ ಸರಕಾರ ಕೂಡಲೇ ಸ್ಪಂದಿಸಬೇಕು: ಸಿದ್ದರಾಮಯ್ಯ

Update: 2020-07-03 12:35 GMT

ಬೆಂಗಳೂರು, ಜು. 3: ರಾಜ್ಯ ಸರಕಾರ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಲಾಕ್‍ಡೌನ್ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿ ಅವರಿಗೆ ಸಂಬಳವನ್ನು ನೀಡಬೇಕು. ಖಾಯಂ ನೌಕರರ ಮಾದರಿಯಲ್ಲೆ ಉದ್ಯೋಗ ಭದ್ರತೆ, ಭವಿಷ್ಯ ನಿಧಿ, ಇಎಸ್‍ಐ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಶುಕ್ರವಾರ ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಅವರು, ಯಾವುದೇ ಕಾರಣಕ್ಕೂ ಯಾವೊಬ್ಬ ಅತಿಥಿ ಉಪನ್ಯಾಸಕರನ್ನು ಉದ್ಯೋಗದಿಂದ ತೆಗೆಯಬಾರದು. ದುಡಿಮೆ ಮಾಡುತ್ತಿದ್ದ ಉದ್ಯೋಗದಾತ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಉದ್ಯೋಗ ಭದ್ರತೆಯನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಕೆಲ ದಿನಗಳಿಂದೀಚೆಗೆ ಒಟ್ಟು 8 ಮಂದಿ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರವು ಕೆಲ ತಿಂಗಳಿಂದ ಅವರಿಗೆ ವೇತನ ನೀಡುವುದನ್ನು ನಿಲ್ಲಿಸಿದೆ. ಇದರಿಂದ 20 ಸಾವಿರ ಅತಿಥಿ ಉಪನ್ಯಾಸಕರ ಬದುಕು ಮೂರಾಬಟ್ಟೆಯಾಗಿದೆ. ಉನ್ನತ ವ್ಯಾಸಂಗ ಮಾಡಿ ಹಲವು ವರ್ಷಗಳಿಂದ ಕಾಲೇಜುಗಳ ಆಧಾರ ಸ್ತಂಭವಾಗಿ ದುಡಿಯುತ್ತಿರುವ ಉಪನ್ಯಾಸಕರುಗಳಿಗೆ ಸಂಬಳ ನೀಡದೆ ಸಂಕಷ್ಟಕ್ಕೆ ದೂಡಿರುವುದು ಅತ್ಯಂತ ಅಮಾನವೀಯ ಎಂದು ಟೀಕಿಸಿದ್ದಾರೆ.

ಅತಿಥಿ ಉಪನ್ಯಾಸಕರ ಪೈಕಿ ಬಹಳ ಜನರಿಗೆ ಸರಕಾರ ಉದ್ಯೋಗದ ವಯೋಮಿತಿಯೂ ಮೀರಿ ಹೋಗಿದೆ. ಇದರಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಮಹಿಳಾ ಉಪನ್ಯಾಸಕರಿದ್ದಾರೆ. ಬೇರೆಲ್ಲೂ ಉದ್ಯೋಗ ಸಿಗದೆ ಇದೀಗ ನರೇಗಾ ಮುಂತಾದ ಯೋಜನೆಗಳಲ್ಲಿ ಕೂಲಿಕಾರರಾಗಿ ಕೆಲಸ ಮಾಡುತ್ತಿದ್ದಾರೆ. ಅತ್ಯಂತ ದಯನೀಯ ಸ್ಥಿತಿ ಇವರಿಗೆ ಬಂದಿದೆ. ಸರಕಾರ ಇದನ್ನು ನೋಡಿಯೂ ಹಾಗೇ ಕಣ್ಣು, ಕಿವಿ, ನಾಲಿಗೆಗಳನ್ನು ಮುಚ್ಚಿಕೊಂಡು ನಿರ್ಲಕ್ಷ್ಯ ಧೋರಣೆ ಕೂಡಲೇ ನಿಲ್ಲಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News