ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿ ನೇಮಕ: ಸರಕಾರದ ಕ್ರಮವನ್ನು ಎತ್ತಿ ಹಿಡಿದ ಹೈಕೋರ್ಟ್

Update: 2020-07-03 17:46 GMT

ಬೆಂಗಳೂರು, ಜು.3: ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿ ನೇಮಿಸಲು ಕ್ರಮ ಕೈಗೊಳ್ಳಲು ಸರಕಾರ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವ ಕ್ರಮವನ್ನು ಹೈಕೋರ್ಟ್ ಶುಕ್ರವಾರ ಎತ್ತಿ ಹಿಡಿದಿದೆ.

ಗ್ರಾ.ಪಂಗೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಸರಕಾರದ ಕ್ರಮವನ್ನು ಎತ್ತಿ ಹಿಡಿಯುವ ಮೂಲಕ ರಿರ್ಟ್ ಅರ್ಜಿಯನ್ನು ತಿರಸ್ಕರಿಸಿದೆ.

ಪಂಚಾಯತ್ ಗಳ ಅವಧಿ ಈಗಾಗಲೇ ಮುಗಿದಿದೆ. ಕಲಂ 8, ಉಪ ಕಲಂ 4ರ ಅನುಸಾರ ಒಂದು ಬಾರಿ ಆಡಳಿತಾಧಿಕಾರಿ ನೇಮಕವಾದರೆ ಅವರು ಚುನಾಯಿತ ಪ್ರತಿನಿಧಿಗಳಿಗೆ ಸಮಾನ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. 5 ವರ್ಷದ ಬಳಿಕ ಚುನಾಯತ್ ಪ್ರತಿನಿಧಿ ಮುಂದುವರಿಯುವುದು ಸಂವಿಧಾನದ 243-ಇ ವಿಧಿ ಪ್ರತಿಬಂಧಿಸುತ್ತದೆ. ಹೀಗಾಗಿ, ಇದಕ್ಕೆ ವಿರುದ್ಧವಾಗಿ ಅರ್ಜಿದಾರರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.        

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚನೆ ಅನುಸಾರವೇ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿ ನೇಮಕಕ್ಕೆ ಕ್ರಮ ಕೈಗೊಂಡಿದ್ದಾರೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೂಚನೆ ನೀಡಿದ್ದಾರೆಯೇ ಹೊರತು ಆದೇಶ ಹೊರಡಿಸಿಲ್ಲ. ಆದೇಶವು ರೂಪುರೇಷೆಗಳನ್ನು ಒಳಗೊಂಡಿದೆ ಎಂಬುದನ್ನೂ ಗಮನಿಸಬೇಕಾಗಿದೆ. ಹೀಗಾಗಿ, ಸರಕಾರದ ಕ್ರಮದಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ನ್ಯಾಯಪೀಠ ವಿವರಿಸಿದೆ.

ಹಿನ್ನೆಲೆ: ಗ್ರಾ.ಪಂ. ಗಳಿಗೆ ಸಾರ್ವತ್ರಿಕ ಚುನಾವಣೆಗಳು ನಡೆಯದಿರುವ ಕಾರಣ ಐದು ವರ್ಷದ ಅವಧಿಯನ್ನು ಮುಗಿಸಿದ ಬಳಿಕ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣದ ಅಡಿಯಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಲು ಸರಕಾರ ನಿರ್ಧರಿಸಿರುತ್ತದೆ. ಹೀಗಾಗಿ, ಅವಧಿ ಪೂರ್ಣಗೊಂಡ ಗ್ರಾ.ಪಂ. ಗಳಿಗೆ ಆಡಳಿತಾಧಿಕಾರಿ ನೇಮಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಈ ಸೂಚನೆಯನ್ನು ರದ್ದುಕೋರಿ ಅರ್ಜಿದಾರರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News