ಕೋವಿಡ್ ಸೋಂಕಿತರ ಶವಸಂಸ್ಕಾರ ವೇಳೆ ವಿಡಿಯೋ ತೆಗೆಯುವಂತಿಲ್ಲ: ಬಿ.ಶ್ರೀರಾಮುಲು

Update: 2020-07-03 16:48 GMT

ಬಳ್ಳಾರಿ, ಜು.3: ಕೋವಿಡ್ ಸೋಂಕಿತರ ಅಮಾನವೀಯ ರೀತಿಯಲ್ಲಿ ಶವಸಂಸ್ಕಾರ ಮಾಡಿರುವ ಕುರಿತು ಜಿಲ್ಲಾಡಳಿತದಿಂದ ಮಾಹಿತಿ ಪಡೆಯಲಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಕುರಿತು ಬಳ್ಳಾರಿ ಜಿಲ್ಲಾಡಳಿತ ಈಗಾಗಲೇ ಕ್ಷಮೆಯಾಚಿಸಿದ್ದು, ಆ ಸಂದರ್ಭದಲ್ಲಿದ್ದ ತಂಡವನ್ನು ಬದಲಾಯಿಸಿ ಮತ್ತೊಂದು ತಂಡವನ್ನು ನಿಯೋಜಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಶುಕ್ರವಾರ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ಕೋವಿಡ್ ಸೋಂಕಿತರ ಶವಸಂಸ್ಕಾರದ ಸಮಯದಲ್ಲಿ ಸಿಬ್ಬಂದಿಗಳು ಯಾವುದೆ ರೀತಿಯ ಮೊಬೈಲ್ ಹಾಗೂ ವೀಡಿಯೊ ಸಂಗ್ರಹಿಸುವ ಸಲಕರಣೆಗಳನ್ನು ತೆಗೆದುಕೊಂಡು ಹೋಗದಂತೆ ಸೂಚನೆ ನೀಡಲಾಗಿದೆ ಎಂದರು.

30 ನಿಮಿಷಗಳಲ್ಲಿ ತಕ್ಷಣ ವರದಿ ನೀಡುವ 10 ಸಾವಿರ ಆಂಟಿಜೇನ್ ಕಿಟ್‍ಗಳನ್ನು ಬಳ್ಳಾರಿ ಜಿಲ್ಲಾಡಳಿತ ಖರೀದಿಸಿ ಈಗಾಗಲೆ ತಪಾಸಣೆ ಶುರು ಮಾಡಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಂಡೂರು ತಾಲೂಕಿನಲ್ಲಿ ಆರೋಗ್ಯ ಸುರಕ್ಷಾ ಅಭಿಯಾನದಡಿ ಆಶಾ ಕಾರ್ಯಕರ್ತೆಯರ ಮೂಲಕ ಮನೆ-ಮನೆಗೆ ಭೇಟಿ ನಡೆಸಿ 60 ವರ್ಷ ಮೇಲ್ಪಟ್ಟವರಿಗೆ, 15 ವರ್ಷದೊಳಗಿನ ಮಕ್ಕಳಿಗೆ ಹಾಗೂ ದೀರ್ಘಕಾಯಿಲೆಗಳಿಂದ ಬಳಲುತ್ತಿರುವವರನ್ನು ಪಲ್ಸ್ ಆಕ್ಸಿಮಿಟರ್ ಮೂಲಕ ತಪಾಸಣೆ ನಡೆಸಲಾಗುತ್ತಿದೆ ಎಂದು ಶ್ರೀರಾಮುಲು ತಿಳಿಸಿದರು.

ತಪಾಸಣೆ ಸಂದರ್ಭದಲ್ಲಿ ಆಕ್ಸಿಜನ್ ಪ್ರಮಾಣ 94ಕ್ಕಿಂತಲೂ ಕಡಿಮೆಯಿದ್ದಲ್ಲಿ ಅಂಥವರ ಸ್ವ್ಯಾಬ್ ತೆಗೆದು ಅವರನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಈಗಾಗಲೇ ಸಂಡೂರು ತಾಲೂಕಿನಲ್ಲಿ 225 ಪಲ್ಸ್ ಆಕ್ಸಿಮಿಟರ್ ಗಳನ್ನು ವಿತರಿಸಿ ಮನೆ-ಮನೆ ಭೇಟಿ ಶುರು ಮಾಡಲಾಗಿದೆ. ಇಡೀ ಜಿಲ್ಲೆಯಾದ್ಯಂತ ಈ ಮನೆ-ಮನೆ ಭೇಟಿ ವಿಸ್ತರಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಕೋವಿಡ್ ಸೋಂಕಿನ ಲಕ್ಷಣವಿಲ್ಲದ ರೋಗಿಗಳಿಗೆ ಹೋಮ್ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. ಹೋಂ ಕ್ವಾರಂಟೈನ್ ಮಾಡುವುದಕ್ಕಿಂತ ಮುಂಚೆ ನಮ್ಮ ತಂಡವು ಆ ಲಕ್ಷಣವಿಲ್ಲದ ರೋಗಿಯ ಮನೆಗೆ ತೆರಳಿ ಪರಿಶೀಲನೆ ನಡೆಸಲಿದೆ. ಅವರು ಇರುವುದಕ್ಕೆ ಸಮರ್ಪಕ ಸೌಕರ್ಯವಿದ್ದಲ್ಲಿ ಮಾತ್ರ ಅಲ್ಲಿರುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇಲ್ಲದಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿರಿಸಲಾಗುವುದು ಎಂದು ಶ್ರೀರಾಮುಲು ತಿಳಿಸಿದರು.

ಬಳ್ಳಾರಿಯಲ್ಲಿ ಇದುವರೆಗೆ 1,084 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಅವುಗಳಲ್ಲಿ 426 ಪ್ರಕರಣಗಳು ಜಿಂದಾಲ್‍ಗೆ ಸೇರಿದವುಗಳಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‍ನಿಂದ ಸಾವನ್ನಪ್ಪಿದ 33 ಪ್ರಕರಣಗಳು ಕುರಿತು ಪ್ರತಿರೋಗಿಗಳ ಬಗ್ಗೆಯೂ ಜಿಲ್ಲಾಡಳಿತದಿಂದ ಮಾಹಿತಿ ಪಡೆಯಲಾಗಿದೆ. ಅವುಗಳಲ್ಲಿ 8 ಡಯಾಲಿಸಿಸ್, 3 ಹೃದಯ ಸಂಬಂಧಿತ ಹಾಗೂ ಇನ್ನೂಳಿದವುಗಳು ವಿವಿಧ ದೀರ್ಘಕಾಯಿಲೆಗಳಿಂದ ಬಳಲುತ್ತಿದ್ದರು ಎಂಬ ಮಾಹಿತಿ ಗೊತ್ತಾಗಿದೆ ಎಂದು ಅವರು ಹೇಳಿದರು.

ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬಂದ ಕಾರಣ ಈ ಪ್ರಮಾಣದಲ್ಲಿ ಸಾವನ್ನಪ್ಪಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಆಗಮಿಸಿದ ನುರಿತ ವೈದ್ಯರ ತಂಡ ಕೂಡ ಪರಿಶೀಲಿಸಿ ಇದೇ ರೀತಿ ತಿಳಿಸಿದೆ. ಬಳ್ಳಾರಿಗೆ ತಕ್ಷಣ ಎಲೆಕ್ಟ್ರಾನಿಕ್ ಬರ್ನ್(ವಿದ್ಯುತ್ ಚಿತಾಗಾರ) ಮಶೀನ್ ಒದಗಿಸಲಾಗುವುದು. ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ವಿಮ್ಸ್ ಅಪರೇಶನ್ ಥಿಯಟೇರ್ ಕಾಮಗಾರಿಗೆ ಜಿಲ್ಲಾ ಖನಿಜ ನಿಧಿ ಅಡಿ 12 ಕೋಟಿ ರೂ. ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಶ್ರೀರಾಮುಲು ತಿಳಿಸಿದರು.

ವೈದ್ಯರು ಹಾಗೂ ಅಧಿಕಾರಿಗಳ ಅಹವಾಲುಗಳನ್ನು ಆಲಿಸಿ ಕೋವಿಡ್‍ನಂತ ಸಂದರ್ಭದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸಲ್ಲಿಸುತ್ತಿರುವ ಸೇವೆ ಅಮೋಘವಾಗಿದೆ. ಅವರ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗಿದೆ. ಗಂಭೀರ ಪ್ರಕರಣಗಳಿಗೆ ಮಾತ್ರ ಬಳ್ಳಾರಿ ಜಿಲ್ಲಾ ಕೋವಿಡ್ ಆಸ್ಪತ್ರೆ ಮೀಸಲಿರಿಸಲಾಗಿದೆ ಎಂದು ಅವರು ಹೇಳಿದರು.

ಜಿಂದಾಲ್ ತನ್ನ ಸಿಬ್ಬಂದಿಯ ಕೋವಿಡ್ ತಪಾಸಣೆಗೆ ಸಂಬಂಧಿಸಿದಂತೆ ಖಾಸಗಿ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡು ಟೆಸ್ಟ್ ಮಾಡಿಸುತ್ತಿದೆ. ವರದಿ ಪಾಸಿಟಿವ್ ಬಂದಲ್ಲಿ ಅಂತ ಸೊಂಕಿತರನ್ನು ಅವರೇ ತಮ್ಮಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ. ಗಂಭೀರ ಪ್ರಕರಣಗಳಿದ್ದಲ್ಲಿ ಮಾತ್ರ ಜಿಲ್ಲಾಡಳಿತದ ಗಮನಕ್ಕೆ ತಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದು ಶ್ರೀರಾಮುಲು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News