ಹನೂರು: 10 ಜಾನುವಾರುಗಳು ಸಾವು; ವಿಷ ಮಿಶ್ರಿತ ಮೇವು ಸೇವಿಸಿರುವ ಶಂಕೆ

Update: 2020-07-04 04:52 GMT

ಹನೂರು, ಜು.4: ವಿಷ ಮಿಶ್ರಿತ ಮೇವನ್ನು ಸೇವಿಸಿ 10 ಜಾನುವಾರುಗಳು ಮೃತಪಟ್ಟು, 50ಕ್ಕೂ ಹೆಚ್ಚು ಜಾನುವಾರುಗಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಹುತ್ತೂರು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಹುತ್ತೂರು ಗ್ರಾಮದ ಸಿದ್ದರಾಜು ಎಂಬುವವರಿಗೆ ಸೇರಿದ್ದ 4, ಶಿವಮೂರ್ತಿ ಎಂಬುವವರಿಗೆ ಸೇರಿದ್ದ 3, ರಂಗಸ್ವಾಮಿ ಎಂಬುವವರಿಗೆ ಸೇರಿದ್ದ 1, ಕೃಷ್ಣಪ್ಪ ಎಂಬುವವರಿಗೆ ಸೇರಿದ್ದ 1 ಮತ್ತು ಶಿವಮಲ್ಲು ಎಂಬುವವರಿಗೆ ಸೇರಿದ್ದ 1 ಜಾನುವಾರು ಮೃತಪಟ್ಟಿವೆ.

ಏನಿದು ಘಟನೆ: ತಾಲೂಕಿನ ಹುತ್ತೂರು ಗ್ರಾಮದಲ್ಲಿ ಮೇಯಲು ಹೊರಟಿದ್ದ ಕೆಲ ಜಾನುವಾರುಗಳು ರಸ್ತೆ ಬದಿಯ ಅಲ್ಲಲ್ಲಿ ಮೃತಪಟ್ಟಿವೆ. ಇನ್ನು ಕೆಲ ಜಾನುವಾರುಗಳು ಹೊಟ್ಟೆ ಉಬ್ಬಿಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸ್ಥಿತಿಯಲ್ಲಿ ಕಂಡುಬಂದಿವೆ.

ಇದನ್ನು ಗಮನಿಸಿದ ಕೂಡಲೇ ಗ್ರಾಮಸ್ಥರು ಆತಂಕಕ್ಕೀಡಾಗಿ ಪಶು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪಿ.ಜಿ.ಪಾಳ್ಯ ಪಶು ಇಲಾಖೆ ಜಾನುವಾರು ಅಧಿಕಾರಿ ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಜಾನುವಾರುಗಳಿಗೆ ಅಗತ್ಯ ಔಷಧೋಪಚಾರ ನೀಡಿದ್ದಾರೆ.

ವಿಷಪೂರಣ ಶಂಕೆ?: ಜಾನುವಾರುಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಗ್ರಾಮದ ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದ್ದು ವಿವಿಧ ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಜಾನುವಾರುಗಳು ಕುಡಿಯುವ ಹಳ್ಳದ ನೀರಿಗೆ ಕಿಡಿಗೇಡಿಗಳು ವಿಷಮಿಶ್ರಣ ಮಾಡಿದ್ದಾರೆ ಎನ್ನುತ್ತಿದ್ದು ಇನ್ನು ಕೆಲವರು ಜಮೀನಿನಲ್ಲಿ ಬೆಳೆಗಳಿಗೆ ಸಿಂಪಡಿಸಿದ್ದ ಕ್ರಿಮಿನಾಶಕಯುಕ್ತ ಮೇವು ಸೇವಿಸಿ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಸಾವಿಗೀಡಾಗಿರುವ ಜಾನುವಾರುಗಳ ಮರಣೋತ್ತರ ಪರೀಕ್ಷೆಯ ವರದಿ ಹೊರಬಂದ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿದು ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News