ದಕ್ಷಿಣ ಕನ್ನಡದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆ

Update: 2020-07-04 06:09 GMT

ಮಂಗಳೂರು: ಜು.4. ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ, ಹೃದಯಾಘಾತದಿಂದ ಮೃತಪಟ್ಟ ಸುಳ್ಯದ ಕೆರೆಮೂಲೆಯ ಮಹಿಳೆಯ ಕೊರೋನ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದೆ. ಈ ಮೂಲಕ ದಕ್ಷಿಣ ಕನ್ನಡದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಈ ಮಹಿಳೆ ವಾರದ ಹಿಂದೆ ಅಸೌಖ್ಯಕ್ಕೊಳಗಾಗಿ ಸುಳ್ಯದ ಸರಕಾರಿ ಆಸ್ಪತ್ರೆಯ ಐಸಿಯು ಘಟಕದಲ್ಲಿ ದಾಖಲಾಗಿದ್ದರು. ಅದೇ ಸಮಯದಲ್ಲಿ ಆ ವಾರ್ಡಿನಲ್ಲಿ ಸೋಣಂಗೇರಿಯ ವೃದ್ಧರೊಬ್ಬರು ಕೂಡ ದಾಖಲಾಗಿದ್ದು, ಅವರು ಅಲ್ಲಿಂದ ಮಂಗಳೂರಿಗೆ ಚಿಕಿತ್ಸೆಗೆ ಹೋಗಿದ್ದರು. ಮಂಗಳೂರಿನಲ್ಲಿ ಆ ವೃದ್ಧರಿಗೆ ಕೊರೋನ ಸೋಂಕು ದೃಢಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಗೆ ಕೊರೋನ ಪರೀಕ್ಷೆ ನಡೆಸಿದಾಗ ಒಬ್ಬ ದಾದಿಗೆ ಸೋಂಕು ದೃಢಪಟ್ಟಿತ್ತು. ಅವರು ಐಸಿಯುನಲ್ಲಿ ದಾಖಲಾಗಿದ್ದ ಸುಳ್ಯದ ಕೆರೆಮೂಲೆಯ ಮಹಿಳೆಗೂ ಚಿಕಿತ್ಸೆ ನೀಡುತ್ತಿದ್ದರೆನ್ನಲಾಗಿದೆ.

ಹೀಗಾಗಿ ಈ ಮಹಿಳೆಯನ್ನು ಎರಡು ದಿನಗಳ ಹಿಂದೆ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಕೊರೋನ ಪರೀಕ್ಷೆಗೆ ಗಂಟಲ ದ್ರವ ತೆಗೆಯಲಾಗಿದ್ದು, ವರದಿ ಬರುವ ಮೊದಲೇ ಮಹಿಳೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಕೊರೋನ ಪರೀಕ್ಷೆಯ ವರದಿ ಬರಲು ಬಾಕಿ ಇದ್ದುದರಿಂದ ಅವರ ಮೃತದೇಹವನ್ನು ಬಿಟ್ಟುಕೊಟ್ಟಿರಲಿಲ್ಲ. ನಿನ್ನೆ ರಾತ್ರಿ ಕೊರೋನ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದೆ.

ಮೃತ ಮಹಿಳೆಯ ಅಂತ್ಯಕ್ರಿಯೆ ಮಂಗಳೂರಿನಲ್ಲಿಯೇ ನಡೆಯಲಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News