ನಾಳೆ ರಾಜ್ಯಾದ್ಯಂತ ಸಂಪೂರ್ಣ ಲಾಕ್‍ಡೌನ್: ಗಡಿಗಳು ಬಂದ್, ನಿಷೇಧಾಜ್ಞೆ ಜಾರಿ

Update: 2020-07-04 12:46 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು. 4: ಮಾರಕ ಕೊರೋನ ವೈರಸ್ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪ್ರತಿ ರವಿವಾರ ಕರ್ಫ್ಯೂ ವಿಧಿಸಲಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ನಾಳೆ(ಜು.5) ರಾಜ್ಯಾದ್ಯಂತ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರಲಿದೆ.

ಕೋವಿಡ್-19 ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗುತ್ತಿದೆ. ಇದರ ಜೊತೆಗೆ ಸೋಂಕು ಸಮುದಾಯಕ್ಕೆ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮುಂದಿನ ನಾಲ್ಕು ರವಿವಾರವೂ ಸಂಪೂರ್ಣ ಲಾಕ್‍ಡೌನ್ ಮಾಡಲು ತೀರ್ಮಾನಿಸಿದೆ. ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ(ಜು.6) ಬೆಳಗಿನ ಜಾವ 5 ಗಂಟೆಯ ವರೆಗೆ ನಿರ್ಬಂಧ ವಿಧಿಸಲಾಗಿದೆ.

ಹಣ್ಣು-ತರಕಾರಿ, ಮಾಂಸದ ಅಂಗಡಿಗಳು, ದಿನಸಿ, ಆಸ್ಪತ್ರೆ, ಔಷಧ ಅಂಗಡಿಗಳು, ಮಾಧ್ಯಮ, ವೈದ್ಯಕೀಯ ಸಿಬ್ಬಂದಿ, ಆ್ಯಂಬುಲೆನ್ಸ್, ತುರ್ತು ಚಿಕಿತ್ಸೆ, ರೋಗಿಗಳು ಆಸ್ಪತ್ರೆಗಳಿಗೆ ತೆರಳಲು ಸೇರಿದಂತೆ ಅಗತ್ಯ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೊಟೇಲ್‍ಗಳಲ್ಲಿ ಪಾರ್ಸಲ್ ವ್ಯವಸ್ಥೆ ಮಾತ್ರ ಇರಲಿದೆ.

ಉಳಿದಂತೆ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಆಟೋರಿಕ್ಷಾ, ಟ್ಯಾಕ್ಸಿ, ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ಸಾರಿಗೆ ಸಂಚಾರ ಇರುವುದಿಲ್ಲ. ಜೊತೆಗೆ ಬಾರ್ ಮತ್ತು ರೆಸ್ಟೋರೆಂಟ್, ಕೈಗಾರಿಕೆ, ಕಾರ್ಖಾನೆಗಳು, ಸಿದ್ಧು ಉಡುಪು ಘಟಕಗಳು, ಸೆಲೂನ್‍ಗಳು ಬಂದ್ ಆಗಿರಲಿದೆ. ಬೆಂಗಳೂರು ನಗರದ ಎಲ್ಲ ಮೇಲ್ಸೇತುವೆಗಳ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ.

ಕಠಿಣ ಕ್ರಮ: ಕರ್ಫ್ಯೂ ಜಾರಿಯಲ್ಲಿರುವ ಅವಧಿಯಲ್ಲಿ ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಸಂಚರಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅನವಶ್ಯಕವಾಗಿ ಸಂಚರಿಸುವ ವಾಹನಗಳ ಮಾಲಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ರವಿವಾರದ ಲಾಕ್‍ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ.

ಕಟ್ಟುನಿಟ್ಟಿನ ಅನುಷ್ಟಾನ: ರಾಜಧಾನಿ ಬೆಂಗಳೂರು, ಗಣಿನಾಡು ಬಳ್ಳಾರಿ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಮೈಸೂರು, ಮಂಡ್ಯ, ಧಾರವಾಡ ಸೇರಿದಂತೆ ಕೊರೋನ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಮೇಲ್ಕಂಡ ಜಿಲ್ಲೆಗಳಲ್ಲಿ ಲಾಕ್‍ಡೌನ್ ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಲು ಸೂಚಿಸಲಾಗಿದೆ. ಅಲ್ಲದೆ ಉಳಿದ ಜಿಲ್ಲೆಗಳಲ್ಲಿಯೂ ಲಾಕ್‍ಡೌನ್ ಇರಲಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಗಡಿಯಲ್ಲಿ ನಿರ್ಬಂಧ: ರಾಜ್ಯಕ್ಕೆ ಒಳಬರುವ ಮತ್ತು ಹೊರ ಹೋಗುವ ಎಲ್ಲ ವಾಹನಗಳಿಗೂ ರವಿವಾರ ಒಂದು ದಿನ ನಿರ್ಬಂಧ ಹೇರಲಿದ್ದು, ಎಲ್ಲ ಗಡಿಗಳನ್ನು ಬಂದ್ ಮಾಡಲಾಗುತ್ತದೆ. ಮುನ್ನಚ್ಚರಿಕೆ ಕ್ರಮವಾಗಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರವಿವಾರ ವಾರದ ರಜೆಯಾಗಿರುವುದರಿಂದ ಸಾರ್ವಜನಿಕರ ಹೆಚ್ಚಿನ ಓಡಾಟವನ್ನು ನಿಯಂತ್ರಿಸಲು ರಾಜ್ಯ ಸರಕಾರ, ಸಂಪೂರ್ಣ ಲಾಕ್‍ಡೌನ್ ಮಾಡುವ ಮೂಲಕ ಜನರ ಸಂಚಾರ ನಿರ್ಬಂಧಕ್ಕೆ ಮುಂದಾಗಿದೆ.

ಸಂಪೂರ್ಣ ಲಾಕ್‍ಡೌನ್ ಅವಧಿಯಲ್ಲಿ ಮೊದಲೇ ನಿಗದಿಯಾಗಿರುವ ಮದುವೆ ಸಮಾರಂಭಗಳಿಗೆ ಷರತ್ತಿನ ಮೇರೆಗೆ ಅವಕಾಶ ನೀಡಲಾಗಿದೆ.

ಏನಿರಲಿದೆ ?: ಹಣ್ಣು-ತರಕಾರಿ, ಮಾಂಸದ ಅಂಗಡಿಗಳು, ದಿನಸಿ, ಆಸ್ಪತ್ರೆ, ಔಷಧ ಅಂಗಡಿಗಳು, ಮಾಧ್ಯಮ, ವೈದ್ಯಕೀಯ ಸಿಬ್ಬಂದಿ, ಆ್ಯಂಬುಲೆನ್ಸ್, ತುರ್ತು ಚಿಕಿತ್ಸೆ, ರೋಗಿಗಳು ಆಸ್ಪತ್ರೆಗಳಿಗೆ ತೆರಳಲು ಸೇರಿದಂತೆ ಅಗತ್ಯ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೊಟೇಲ್‍ಗಳಲ್ಲಿ ಕೇವಲ ಪಾರ್ಸಲ್ ವ್ಯವಸ್ಥೆ ಮಾತ್ರವೇ ಇರಲಿದೆ.

ಏನಿಲ್ಲ ?: ಕೆಎಸ್ಸಾರ್ಟಿಸಿ, ಬಿಎಂಟಿಸಿ, ಆಟೋರಿಕ್ಷಾ, ಟ್ಯಾಕ್ಸಿ, ದ್ವಿಚಕ್ರ ವಾಹನ, ಸೇರಿದಂತೆ ಯಾವುದೇ ಸಾರಿಗೆ ಸಂಚಾರ ಇರುವುದಿಲ್ಲ. ಜೊತೆಗೆ ಬಾರ್ ಮತ್ತು ರೆಸ್ಟೋರೇಟ್, ಕೈಗಾರಿಕೆ, ಕಾರ್ಖಾನೆಗಳು, ಸಿದ್ಧು ಉಡುಪು ಘಟಕಗಳು, ಸೆಲೂನ್‍ಗಳು ಬಂದ್ ಆಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News