‘ನಜೀಬ್ ಚಿತ್ರವನ್ನು ಹೃದಯಕ್ಕೆ ಒತ್ತಿ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ, ನನ್ನ ಕೂಗು ಚೌಕಿದಾರ್ ಗೆ ಕೇಳಿಸಲೇ ಇಲ್ಲ’

Update: 2020-07-04 16:10 GMT

ಈದ್ ಖರೀದಿಯಿಂದ ಮರಳುತ್ತಿದ್ದ ಜುನೈದ್‌ನ ಮೇಲೆ ಚೂರಿಗಳಿಂದ ಬರ್ಬರ ದಾಳಿ ನಡೆಸಲಾಯಿತು. ಜೆಎನ್‌ಯು ವಿದ್ಯಾರ್ಥಿ ನಜೀಬ್ ಜಂಗ್ ಹೆಸರು ಮರೆತು ಹೋಯಿತು. ‘ನನ್ನ ಜಾತಿಯೇ ನನ್ನ ತಪ್ಪು ಆಗಿದೆ ’ ಎನ್ನುವುದು ಹೈದರಾಬಾದ್ ವಿವಿಯ ಹಾಸ್ಟೆಲ್‌ನ ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪಿಎಚ್‌ಡಿ ವಿದ್ಯಾರ್ಥಿ ರೋಹಿತ ವೇಮುಲನ ಕೊನೆಯ ಮಾತುಗಳಾಗಿದ್ದವು. ಇಂಜಿನಿಯರ್ ಯೂಸುಫ್ ಖ್ವಾಜಾ ಪೊಲೀಸ್ ಕಸ್ಟಡಿಯಲ್ಲಿ ಕೊಲ್ಲಲ್ಪಟ್ಟಿದ್ದ. ಈ ನಾಲ್ವರ ಕುಟುಂಬಗಳಲ್ಲಿ ಸಾಮಾನ್ಯವಾಗಿರುವುದೆಂದರೆ ತಮ್ಮ ಕರುಳುಕುಡಿಗಳನ್ನು ಅನ್ಯಾಯವಾಗಿ ಕಳೆದುಕೊಂಡು ಹೆಪ್ಪುಗಟ್ಟಿರುವ ನೋವು....

ಇಂದಿಗೂ ಈ ನಾಲ್ವರ ತಾಯಂದಿರು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಇದು ಇಂತಹ ತಾಯಂದಿರಲ್ಲಿ ಓರ್ವರಾಗಿರುವ, ನಾಪತ್ತೆಯಾಗಿರುವ ನಜೀಬ್ ತಾಯಿ ಫಾತಿಮಾ ನಫೀಸ್ ಅವರ ಯಾತನಾಮಯ ಕಥೆ.

 “ಭಾರತದಂತಹ ದೊಡ್ಡ ದೇಶದಲ್ಲಿ ನಮ್ಮಂತೆ ನೋವನ್ನು ಅನುಭವಿಸುತ್ತಿರುವ ಸಾವಿರಾರು ತಾಯಂದಿರಿದ್ದಾರೆ. ಅವರ ಬದುಕಿನಲ್ಲಿ ಪ್ರತಿಕ್ಷಣವೂ ಉಸಿರುಗಟ್ಟುತ್ತಿರುತ್ತದೆ, ಅವರು ಜೀವಚ್ಛವಗಳಂತೆ ಬದುಕುತ್ತಿದ್ದಾರೆ. ಅವರ ಮತ್ತು ನಮ್ಮ ಸಮಸ್ಯೆಗಳು ಒಂದೇ ಆಗಿವೆ. ನಮ್ಮ ಹೋರಾಟ ವೈಯಕ್ತಿಕವಾದುದು ಎಂದು ಹಲವರು ಭಾವಿಸಿರಬಹುದು, ಆದರೆ ಇದು ವೈಯಕ್ತಿಕವಲ್ಲ. ಇದು ನ್ಯಾಯಕ್ಕಾಗಿ ನಮ್ಮ ಹೋರಾಟವಾಗಿದೆ. ಆದರೆ ನಮ್ಮ ಹೋರಾಟವು ನಮಗೆ ನ್ಯಾಯ ದೊರಕುವಂತೆ ಮಾಡುವ ಜೊತೆಗೆ ಇನ್ನಷ್ಟು ಜುನೈದ್ ಮತ್ತು ನಜೀಬ್ ಗಳು ಆಗದಂತೆ ಇತರರಿಗೂ ಮಾರ್ಗವೊಂದನ್ನು ತೆರೆಯಲಿದೆ” ಎಂದು ನಫೀಸ್ ಹೇಳುತ್ತಾರೆ.

 “ಒಂದಲ್ಲ ಒಂದು ದಿನ ನಜೀಬ್ ಮರಳಿ ಬರುತ್ತಾನೆ ಎಂದು ನಾನು ಆಶಿಸಿದ್ದೇನೆ. ಆದರೆ ಸಾಯಿರಾ (ಜುನೈದ್ ತಾಯಿ) ಮತ್ತು ರಾಧಿಕಾ (ವೇಮುಲ ತಾಯಿ) ಅವರಿಗೆ ಈ ಆಸೆಯೂ ಇಲ್ಲ. ತಾಯಿಯೋರ್ವಳು ತನಗೆ ಸುಸ್ತಾಗಿಬಿಟ್ಟಿದೆ ಎಂದು ಹೇಳುವುದನ್ನು ನೀವೆಂದೂ ಕೇಳಿರಲಿಕ್ಕಿಲ್ಲ. ಅತ್ಯಂತ ಗಾಢನಿದ್ರೆಯಲ್ಲಿರುವ ತಾಯಿಯೂ ಹಸಿವಿನಲ್ಲಿ ತನ್ನ ಮಗುವು ಹೊರಳಾಡುವುದನ್ನು ಆಲಿಸಿದ ತಕ್ಷಣ ಎದ್ದೇಳುತ್ತಾಳೆ. ಏಕೆಂದರೆ ತಾಯಂದಿರು ಎಂದೂ ಸುಸ್ತಾಗುವುದಿಲ್ಲ ಮತ್ತು ನಾನೂ ಎಂದೂ ಸುಸ್ತಾಗುವುದಿಲ್ಲ” ಎಂದರು.

ಉತ್ತರ ಪ್ರದೇಶದ ಬದಾಯುನ್ ನಿವಾಸಿ ನಫೀಸ್(55) ಹಲವಾರು ಮಹಿಳೆಯರ ಪಾಲಿಗೆ ದಣಿವರಿಯದ ದೃಢನಿರ್ಧಾರ ಮತ್ತು ಅಸೀಮ ಧೈರ್ಯದ ಸಂಕೇತವಾಗಿದ್ದಾರೆ. ತನ್ನ ಅನಾರೋಗ್ಯಪೀಡಿತ ಪತಿಯನ್ನು ನೋಡಿಕೊಳ್ಳುವ ಜೊತೆಗೆ ತನ್ನ ಮಗನನ್ನು ಹುಡುಕಲು ಕಳೆದ ನಾಲ್ಕೂವರೆ ವರ್ಷಗಳಿಂದಲೂ ಹೋರಾಡುತ್ತಿದ್ದಾರೆ.

ಬೀದಿಗಳಲ್ಲಿ ಧರಣಿ ಕುಳಿತಾಗ ನಫೀಸ್ ಪೊಲೀಸ್ ದೌರ್ಜನ್ಯಗಳನ್ನೂ ಎದುರಿಸಿದ್ದಾರೆ. ಕಣ್ಣೀರು ಬತ್ತಿ ಹೋಗುವ ತನಕ ಬಹಿರಂಗವಾಗಿಯೇ ಅತ್ತಿದ್ದಾರೆ. ತನ್ನ ಮಗನಿಗಾಗಿ ಅವರ ಆಕ್ರಂದನ ನಜೀಬ್‌ಗೆ ತಲುಪದಿದ್ದರೂ ಅದು ದೇಶದಲ್ಲಿನ ಹಲವಾರು ಹೃದಯಗಳನ್ನು ಕಲಕಿದೆ.”ನನ್ನ ಪ್ರೀತಿಯ ಮಗ ನಜೀಬ್ ನಾಪತ್ತೆಯಾಗಿಲ್ಲ, ಆತ ನಾಪತ್ತೆಯಾಗುವಂತೆ ಮಾಡಲಾಗಿದೆ. ನಾನು ಸಾಯುವ ಮುನ್ನ ಅವನನ್ನು ಪತ್ತೆ ಹಚ್ಚಲಾಗುವುದೇ ಎನ್ನುವುದನ್ನು ನೋಡಬೇಕಿದೆ. ಆತ ನನಗಿಂತ ಮೊದಲೇ ಈ ಜಗತ್ತನ್ನು ತೊರೆದಿದ್ದಾನೆ ಎನ್ನುವುದನ್ನು ನನ್ನ ಹೃದಯವು ಎಂದಿಗೂ ನಂಬುವುದಿಲ್ಲ”  ಎಂದು ಅವರು ಹೇಳಿದರು.

ಜೆಎನ್‌ಯುದಲ್ಲಿ ಬಯೊಟೆಕ್ನಾಲಜಿಯಲ್ಲಿ ಎಂಎಸ್ಸಿ ಮಾಡುತ್ತಿದ್ದ ನಜೀಬ್ 2016,ಅ.15ರಿಂದಲೂ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ್ದ ಸಿಬಿಐ ಕೈಚೆಲ್ಲಿದ್ದು, 2018ರಲ್ಲಿ ಪ್ರಕರಣದ ಕಡತವನ್ನು ಮುಚ್ಚಿದೆ.

ನಫೀಸ್ ಹೇಳುವಂತೆ ಎಬಿವಿಪಿ ಕಾರ್ಯಕರ್ತರು ನಜೀಬ್ ಜೊತೆ ಜಗಳವಾಡಿದ್ದರು ಮತ್ತು ಆತನನ್ನು ಥಳಿಸಿದ್ದರು ಎಂದು ಜೆಎನ್‌ಯುದಲ್ಲಿನ ಆತನ ಸ್ನೇಹಿತರು ಅವರಿಗೆ ಮಾಹಿತಿ ನೀಡಿದ್ದರು. ಇದಾದ ಬಳಿಕ ನಜೀಬ್ ‌ನನ್ನು ಯಾರೂ ನೋಡಿಯೇ ಇಲ್ಲ. ನಫೀಸ್ ಮರುದಿನ ಎಫ್‌ಐಆರ್ ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದ್ದರಾದರೂ,ತಾವು ನಜೀಬ್‌ನನ್ನು 24 ಗಂಟೆಗಳಲ್ಲಿ ಪತ್ತೆ ಹಚ್ಚುತ್ತೇವೆ, ನೀವೀಗ ಹೊರಡಿ ಎಂದು ಹೇಳುವ ಮೂಲಕ ಪೊಲೀಸರು ಅವರ ದಾರಿ ತಪ್ಪಿಸಿದ್ದರು.

 “ನಜೀಬ್ ಚಿತ್ರವನ್ನು ನನ್ನ ಹೃದಯಕ್ಕೆ ಒತ್ತಿಕೊಂಡು ಬಿಕ್ಕಿಬಿಕ್ಕಿ ಅತ್ತಿದ್ದೆ, ಆದರೆ ನನ್ನ ಧ್ವನಿಯು ‘ಚೌಕಿದಾರ್’ ಕಿವಿಗೆ ಬೀಳಲೇ ಇಲ್ಲ. ನಾನು ಕೂಗುವುದನ್ನು ನಿಲ್ಲಿಸಿರಲಿಲ್ಲ. ಆದರೆ ‘ಚೌಕಿದಾರ್’ಗೆ ಅದನ್ನು ಆಲಿಸುವ ಸೌಜನ್ಯವೂ ಇರಲಿಲ್ಲ. ನಾನು ಹಲವಾರು ದಿನಗಳ ಕಾಲ ಆಕ್ರಂದನ ಮಾಡುತ್ತಲೇ ಇದ್ದೆ ಮತ್ತು ನನ್ನ ಗಂಟಲು ಉರಿಯತೊಡಗಿತ್ತು, ಆದರೆ ‘ಚೌಕಿದಾರ್’ಗೆ ನನ್ನ ಧ್ವನಿ ಕೇಳಿಸಲೇ ಇಲ್ಲ. ಇಂದಿಗೂ ನನ್ನ ಹೃದಯವು ನೋವನ್ನು ಅನುಭವಿಸುತ್ತಿದೆ, ಅದು ಎಷ್ಟಿದೆಯೆಂದರೆ ಅದನ್ನು ಹಂಚಿಕೊಳ್ಳಲೂ ನನಗೆ ಆಗುತ್ತಿಲ್ಲ” ಎಂದು ನಫೀಸ್ ಹೇಳಿದರು.

“ನನ್ನ ಮಗ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಆತ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾನೆ ಎಂದು ನಾನು ಸಂತಸ ಪಟ್ಟುಕೊಳ್ಳುತ್ತಿದ್ದೆ. ಅದೊಂದು ದಿನ ಆತ ನಾಪತ್ತೆಯಾಗಿದ್ದಾನೆ ಎಂಬ ಸುದ್ದಿ ಬಂದಿತ್ತು. ಅದರ ನಂತರ ಆತನ ವಿರುದ್ಧ ಸುಳ್ಳುಗಳ ಅಭಿಯಾನಗಳು ಆರಂಭಗೊಂಡಿದ್ದವು. ಆತ ಮರಳಿ ಬರುತ್ತಾನೆ ಎಂಬ ನಂಬಿಕೆ ಈಗಲೂ ನನಗಿದೆ. ಸದ್ಯಕ್ಕೆ ದಿಲ್ಲಿಯ ಪಟಿಯಾಳಾ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದೇವೆ” ಎಂದವರು ವಿವರಿಸುತ್ತಾರೆ.

Writer - ಆಸ್ ಮುಹಮ್ಮದ್ ಕೈಫ್, Twocircles. net

contributor

Editor - ಆಸ್ ಮುಹಮ್ಮದ್ ಕೈಫ್, Twocircles. net

contributor

Similar News