ಮೋದಿಯವರಲ್ಲಿ ದೇವರಾಜ ಅರಸು ಅವರನ್ನು ಕಾಣುತ್ತಿದ್ದೇನೆ: ಮಾಜಿ ಸಚಿವ ಎಚ್.ವಿಶ್ವನಾಥ್

Update: 2020-07-04 16:51 GMT

ಮೈಸೂರು, ಜು.4: ಜೆಡಿಎಸ್ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತು ಹಾಕಿದ್ದ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಗೆ ಕರೆ ತಂದಿದ್ದೇ ನಾನು. ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯರನ್ನು ಈ ರಾಜ್ಯದ ಮುಖ್ಯಮಂತ್ರಿ ಮಾಡಿದ್ದಕ್ಕೆ ಪಶ್ಚಾತ್ತಾಪ ಆಗಿಲ್ಲ, ಸಂತೋಷವಾಗಿದೆ. ಆದರೆ ಸಿದ್ದರಾಮಯ್ಯ ಎಲ್ಲರನ್ನೂ ತುಳಿಯುವ ಕೆಲಸ ಮಾಡಿದರು. ಎಲ್ಲರನ್ನೂ ತುಳಿಯುವುದೇ ಸಿದ್ದರಾಮಯ್ಯ ಕೆಲಸ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಎಚ್.ವಿಶ್ವನಾಥ್ ಕಿಡಿಕಾರಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ವಿರುದ್ಧ ಆಪಾದನೆ ಮಾಡುತ್ತಿರುವ ಪ್ರತಿಪಕ್ಷಗಳ ನಾಯಕರು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಕೇವಲ ಹಿಟ್ ಅಂಡ್ ರನ್ ನಂತೆ ಆರೋಪ ಮಾಡಬೇಡಿ. ಕಾಂಗ್ರೆಸ್ ನಾಯಕರೇ ಅಪ್ರಬುದ್ದರಂತೆ ಮಾತನಾಡಬೇಡಿ ಎಂದು ವಾಗ್ದಾಳಿ ನಡೆಸಿದರು.

ಮೋದಿ ಈ ದೇಶದ ಮೊದಲ ಅಹಿಂದ ಪ್ರಧಾನಿ. ಅಹಿಂದ ಎನ್ನುವ ಸಿದ್ದರಾಮಯ್ಯ ಇದನ್ನು ನೆನಪಿನಲ್ಲಿಟ್ಟುಕೊಳ್ಳಲಿ. ಮೋದಿಗೂ ದೇವರಾಜ ಅರಸುರವರಿಗೂ ಸಾಕಷ್ಟು ಸಾಮ್ಯತೆಯಿದೆ. ಮೋದಿಯವರಲ್ಲಿ ನಾನು ದೇವರಾಜ ಅರಸು ಅವರನ್ನು ಕಾಣುತ್ತಿದ್ದೇನೆ. ಮೋದಿಯವರನ್ನು ಟೀಕಿಸುವ ಮುನ್ನ ಯೋಚಿಸಿ ಮಾತನಾಡಿ. ಮೋದಿ ಈ ದೇಶ ಕಂಡ ಯಶಸ್ವಿ ನಾಯಕ. ದೇಶದ ಸಮಗ್ರತೆ ಐಕ್ಯತೆ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಕಿಡಿ ಕಾರಿದರು.

ಪ್ರಧಾನಿ ಮೇಲೆ ವಿಪಕ್ಷಗಳು ಮಾಡಿರುವ ಪದ ಪ್ರಯೋಗ ದೇಶದ ಜನರು ಮೆಚ್ಚಲ್ಲ. ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಸಾಧನೆ ಏನು? ಮೋದಿ ಸಾಧನೆ ಏನು ? ದೊಡ್ಡ ದೊಡ್ಡವರೆಲ್ಲಾ ಅಪ್ರಬುದ್ಧರಾಗಿ ಮಾತಾಡುತ್ತಿದ್ದಾರೆ. ಮೋದಿಯವರಲ್ಲಿ ದೇವರಾಜ ಅರಸು ಅವರನ್ನು ಕಾಣುತ್ತಿದ್ದೇನೆ. ಅಹಿಂದ ಪ್ರಧಾನಿಯನ್ನು ಈ ರೀತಿ ಟೀಕೆ ಮಾಡುವುದು ಸರಿಯಲ್ಲ. ರಾಹುಲ್ ಗಾಂಧಿ, ಈ ಪ್ರಧಾನಿಗೂ ಗೌರವ ಕೊಡಲ್ಲ, ಕಾಂಗ್ರೆಸ್ ನಲ್ಲಿ ಪ್ರಧಾನಿಯಾದವರಿಗೂ ಗೌರವ ಕೊಟ್ಟಿಲ್ಲ. ನೀವು ಗೌರವ ಕೊಡುವುದನ್ನೆ ಕಲಿತಿಲ್ಲ. ಸಿದ್ದರಾಮಯ್ಯ ಪ್ರಧಾನಿಯನ್ನು ಅನ್ ಫಿಟ್ ಅಂತಾರೆ. ಹಾಗಾದರೆ ನೀವು ಸಿಎಂ ಆಗುವುದಕ್ಕೆ ಫಿಟ್ ಆಗಿದ್ರಾ? ಮೋದಿ ಅವರದು ಗುಜರಾತ್ ಮಾಡೆಲ್ ಇದೆ, ನಿಮ್ಮ ಮಾಡೆಲ್ ಏನಿದೆ? ಅನ್ನಭಾಗ್ಯದ ಕಲ್ಪನೆಯನ್ನು ನಿಮಗೆ ಕೊಟ್ಟಿದ್ದು ನಾನೇ. ಅದು ಕೂಡ ನಿಮ್ಮ ಸಾಧನೆಯಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯರನ್ನು ಕಾಂಗ್ರೆಸ್ ಗೆ ಕರೆದುಕೊಂಡು ಬಂದವನು ನಾನು. ಜೆಡಿಎಸ್ ನಿಂದ ಹೊರಗೆ ಹಾಕಿಸಿ ಕೊಂಡಾಗ ವಾಪಸ್ ಸಿದ್ದರಾಮನಹುಂಡಿಗೆ ಹೋಗಬಾರದು ಅಂತ ಕಾಂಗ್ರೆಸ್ ಗೆ ಕರೆತಂದೆ. ಕಾಂಗ್ರೆಸ್ ಗೆ ಬಂದ ಸಿದ್ದರಾಮಯ್ಯ ಹಿಂದುಳಿದ ನಾಯಕರನ್ನು ತುಳಿಯುವ ಕೆಲಸ ಮಾಡಿದರು. ತುಳಿಯೋದೆ ಸಿದ್ದರಾಮಯ್ಯನ ಮಾಡೆಲ್ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಎರಡು ಪ್ರತಿಪಕ್ಷಗಳು ಸೇರಿಕೊಂಡು ಸರ್ಕಾರ ರಚಿಸಿದ್ದೇ ಬ್ಲಂಡರ್. ಕಾಂಗ್ರೆಸ್ ಜೆಡಿಎಸ್ ಸರ್ಕಾರ ರಚನೆ ಮಾಡಿದ ಕ್ರಮವನ್ನು ಬ್ಲಂಡರ್ ಎಂದು ಟೀಕಿಸಿದ ಅವರು ನನಗೆ ಎಂಎಲ್ಸಿ ಸ್ಥಾನ ಸಿಗದಿದ್ದರೆ ಆಕಾಶಕ್ಕೂ ಹೋಗುವುದಿಲ್ಲ, ಪಾತಾಳಕ್ಕೂ ಹೋಗುವುದಿಲ್ಲ. ವಿಶ್ವನಾಥ್ ವಿಶ್ವನಾಥನೇ. ನನಗೆ ಎಂಎಲ್ಸಿ ಸ್ಥಾನ ನೀಡಲು ಯಾವುದೇ ರೀತಿಯ ಕಾನೂನು ತೊಡಕಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News