ಸರಕಾರ ಕೊರೋನದ ಗಂಭೀರತೆ ಅರಿತು ಕೆಲಸ ಮಾಡಲಿ: ಎಚ್.ಕೆ.ಪಾಟೀಲ್

Update: 2020-07-04 18:18 GMT

ಬೆಂಗಳೂರು, ಜು.4: ಕೊರೋನ ವೈರಸ್ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಇನ್ನು ಮುಂದೆಯಾದರೂ ರಾಜ್ಯದ ನಾಗರಿಕರನ್ನು ಕೊರೋನ ವಿಮೆ ವ್ಯಾಪ್ತಿಗೆ ತರುವ ಮೂಲಕ ಖಾಸಗಿ ಆಸ್ಪತ್ರೆ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಗೆ ಅನುಕೂಲ ಮಾಡಿಕೊಡಬೇಕೆಂದು ಮಾಜಿ ಸಚಿವ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನ ನಿರ್ವಹಣೆಯಲ್ಲಿ ಪ್ರತಿಯೊಂದು ಪರಿಕರದ ಖರೀದಿಯಲ್ಲಿ ಭ್ರಷ್ಟಾಚಾರದ ದೂರುಗಳು ಕೇಳಿಬಂದಿದ್ದು, ಕೊರೋನ ನಿರ್ವಹಣೆಯಲ್ಲಿ ಸಂದೇಹಗಳು ಬಲವಾಗುತ್ತಿವೆ. ಅಲ್ಲದೆ, ಸರಕಾರವು ಹೊಸಕೋಟೆಯ ಎಸ್.ಎಂ.ಫಾರ್ಮಾಸಿಟಿಕಲ್‍ನಿಂದ ಖರೀದಿಸಿರುವ ಸ್ಯಾನಿಟೈಸರ್ ಕಳಪೆ ಗುಣಮಟ್ಟದ್ದಾಗಿದೆ ಎಂದು ಆರೋಪಿಸಿದರು.

ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಯ ಸಾವಿರಾರು ಬಸ್‍ಗಳು ತಮ್ಮ ದೈನಂದಿನ ಸೇವೆಯನ್ನು ನಿಲ್ಲಿಸಿ ಖಾಲಿ ನಿಂತಿರುವಾಗಿ ಆ ಬಸ್‍ಗಳನ್ನು ತಾತ್ಕಾಲಿಕವಾಗಿ ಆ್ಯಂಬುಲೆನ್ಸ್ ರೂಪದಲ್ಲಿ ಪರಿವರ್ತಿಸಿ ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲು ಸರಕಾರಕ್ಕೆ ಏನು ತೊಂದರೆ ಇದೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಪಾಟೀಲ ಒತ್ತಾಯಿಸಿದರು.

ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಲಾಕ್‍ಡೌನ್ ಈಗ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟ ಅವರು. ಸರಕಾರ ಬೌದ್ಧಿಕ ದಿವಾಳಿಕೋರತನ ಪ್ರದರ್ಶಿಸುತ್ತಿದೆ. ಸರಕಾರ ಇನ್ನು ಮುಂದೆಯಾದರೂ ಕೊರೋನದ ಗಂಭೀರತೆ ಅರಿತು ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

ಉತ್ತಮ ಚಿಕಿತ್ಸೆ, ಆ್ಯಂಬುಲೆನ್ಸ್ ಸೇವೆ ಮತ್ತು ಗೌರವಯುತ ಅಂತ್ಯಸಂಸ್ಕಾರಗಳು ಅತ್ಯಂತ ಪ್ರಮುಖವಾದ ಮಾನವ ಹಕ್ಕುಗಳಾಗಿದ್ದು, ಈ ಹಕ್ಕುಗಳನ್ನು ದಿನನಿತ್ಯವು ಉಲ್ಲಂಘಿಸಲಾಗುತ್ತಿದೆ. ರಾಜ್ಯ ಮಾನವ ಹಕ್ಕು ಆಯೋಗ ಮತ್ತು ರಾಷ್ಟ್ರೀಯ ಮಾನವಹಕ್ಕು ಆಯೋಗಗಳು ತಾವೇ ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿಕೊಂಡು ಈ ಸೇವೆಗಳನ್ನು ಒದಗಿಸುವಲ್ಲಿ ಆಗುತ್ತಿರುವ ಪ್ರಮಾದ ಮತ್ತು ಹೀನಾಯ ಪರಿಸ್ಥಿತಿಯ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಕೋರಿದರು.

ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವ್ಯಾಪ್ತಿಯಲ್ಲಿ ಈ ಎಲ್ಲ ವಿಷಯಗಳು ಈಗ ಚರ್ಚೆಗೆ ಬಂದಿದ್ದು ಜು.6ರ ಸೋಮವಾರದೊಳಗೆ ಕೊರೋನ ಪರಿಕರ ಖರೀದಿಸಿದರ ಬಗ್ಗೆ ಕೇಳಿ ಬಂದಿರುವ ದೂರುಗಳ ಕುರಿತು ಎಲ್ಲ ವಿವರವಾದ ದಾಖಲೆಗಳೊಂದಿಗೆ ಸಂಪೂರ್ಣ ಮಾಹಿತಿ ಒದಗಿಸುವಂತೆ ನಿರ್ದೇಶನ ನೀಡಲಾಗಿದೆ. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಾಹಿತಿ ಒದಗಿಸುವುದಾಗಿ ತಿಳಿಸಿದ್ದಾರೆಂದು, ಮಾಹಿತಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪಾಟೀಲ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News