32 ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೊರೋನ ಸೋಂಕು ?

Update: 2020-07-04 18:30 GMT
ಫೈಲ್ ಫೋಟೋ

ಬೆಂಗಳೂರು, ಜು. 4: ಶುಕ್ರವಾರವಷ್ಟೇ ಪೂರ್ತಿಯಾದ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ ರಾಜ್ಯದ 32 ವಿದ್ಯಾರ್ಥಿಗಳಲ್ಲಿ ಕೊರೋನ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದ್ದು, ಇದು ಪೋಷಕರನ್ನು ಆತಂಕಕ್ಕೆ ತಳ್ಳಿದೆ.

ಕೊರೋನ ಸೋಂಕಿನ ಭೀತಿಯ ನಡುವೆಯೂ ರಾಜ್ಯದಲ್ಲಿ 7 ಲಕ್ಷ 61,506 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. 32 ವಿದ್ಯಾರ್ಥಿಗಳಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಸರಕಾರದ ದಾಖಲೆಗಳು ತಿಳಿಸಿವೆ.

ಜೂನ್ 25 ರಿಂದ ಜುಲೈ 3ರವರೆಗೆ ಪರೀಕ್ಷೆ ನಡೆದಿತ್ತು. ಕೊರೋನ ಸೋಂಕು ಉಲ್ಬಣವಾಗುತ್ತಿರುವ ನಡುವೆಯೇ ಸರ್ಕಾರ ಪರೀಕ್ಷೆ ನಡೆಸಲು ಮುಂದಾಗಿದ್ದಕ್ಕೆ ವಿಪಕ್ಷ ನಾಯಕರಿಂದ ಮತ್ತು ಪೋಷಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ 32 ವಿದ್ಯಾರ್ಥಿಗಳಿಗೆ ಕೊರೋನ ಸೋಂಕು ಇರುವುದು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಸೋಂಕು ಪತ್ತೆಯಾದ ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದ 80 ವಿದ್ಯಾರ್ಥಿಗಳನ್ನು ಕ್ವಾರೆಂಟೈನ್‍ನಲ್ಲಿಡಲಾಗಿದೆ. ಇವರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದರೆ, ಆಸ್ಪತ್ರೆಗೆ ದಾಖಲು ಮಾಡಲು ತೀರ್ಮಾನಿಸಲಾಗಿದೆ. ಕಂಟೈನ್‍ಮೆಂಟ್ ಝೋನ್ ಗುರುತಿಸಿದ ಭಾಗದ 3,911 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿಲ್ಲ. ಅನಾರೋಗ್ಯದಿಂದ 863 ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News