ಕಳಸ ಪಟ್ಟಣದಲ್ಲಿ ತಂಗಿದ್ದ ವೃದ್ಧೆಗೆ ಕೊರೋನ ದೃಢ: ಮನೆ, ಖಾಸಗಿ ಆಸ್ಪತ್ರೆ ಸೀಲ್‍ಡೌನ್

Update: 2020-07-05 12:45 GMT

ಚಿಕ್ಕಮಗಳೂರು, ಜು.5: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದಲ್ಲಿ ತನ್ನ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದ ವೃದ್ಧೆಯೊಬ್ಬರಲ್ಲಿ ಕೊರೋನಾ ಪಾಸಿಟಿವ್ ಇರುವುದು ಶಿವಮೊಗ್ಗದಲ್ಲಿ ಪತ್ತೆಯಾಗಿದ್ದು, ಪಾಸಿಟಿವ್ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಕಳಸ ಪಟ್ಟಣದಲ್ಲಿ ವೃದ್ಧೆ ತಂಗಿದ್ದ ಮನೆ ಹಾಗೂ ಖಾಸಗಿ ಆಸ್ಪತ್ರೆಯೊಂದನ್ನು ಸೀಲ್‍ಡೌನ್ ಮಾಡಲಾಗಿದೆ.

ಮೂಲತಃ ಬಾಳೆಹೊನ್ನೂರು ಸಮೀಪದ ಖಾಂಡ್ಯದವರಾಗಿರುವ 65 ವರ್ಷದ ವೃದ್ಧೆ ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿಂದ 2 ತಿಂಗಳ ಹಿಂದೆ ಕಳಸ ಪಟ್ಟಣದಲ್ಲಿರುವ ತನ್ನ ಮಗಳ ಮನೆಗೆ ಬಂದು ಎರಡು ತಿಂಗಳಿನಿಂದ ಕಳಸದಲ್ಲೇ ನೆಲೆಸಿದ್ದರೆಂದು ತಿಳಿದು ಬಂದಿದೆ.

ಕಳಸ ಪಟ್ಟಣದಲ್ಲಿನ ತನ್ನ ಮಗಳ ಮನೆಯಲ್ಲಿ ವಾಸವಿದ್ದ ವೃದ್ಧೆಗೆ ಕೆಲ ದಿನಗಳ ಹಿಂದೆ ತೀವ್ರ ಜ್ವರ ಕಾಣಿಸಿಕೊಂಡಿದ್ದು, ಕೂಡಲೇ ವೃದ್ಧೆಯನ್ನು ಸಂಬಂಧಿಗಳು ಕಳಸ ಪಟ್ಟಣದಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ವೈದ್ಯರ ಬಳಿ ತಪಾಸಣೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆದರೆ ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ವೃದ್ಧೆಯನ್ನು ಮತ್ತೆ ಶಿವಮೊಗ್ಗಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಈ ವೇಳೆ ಶಿವಮೊಗ್ಗದಲ್ಲಿ ವೃದ್ಧೆಯಲ್ಲಿ ಕೊರೋನ ಸೋಂಕು ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವೃದ್ಧೆಯ ರಕ್ತ, ಗಂಟಲ ದ್ರವದದ ಮಾದರಿಯನ್ನು ಕೋವಿಡ್ ಲ್ಯಾಬ್‍ನಲ್ಲಿ ಪರೀಕ್ಷೆ ಮಾಡಿದ್ದು, ವೃದ್ಧೆಯಲ್ಲಿ ಪಾಸಿಟಿವ್ ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಸದ್ಯ ವೃದ್ಧೆಯನ್ನು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಕೊರೋನ ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಲಾಗಿದೆ.

ವೃದ್ಧೆಯಲ್ಲಿ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕಳಸ ಪಟ್ಟಣದಲ್ಲಿ ವೃದ್ಧೆ ಕಳೆದ ಎರಡು ತಿಂಗಳನಿಂದ ತಂಗಿದ್ದ ಮನೆಯನ್ನು ಸೀಲ್ ಮಾಡಿದ್ದು, ವೃದ್ಧೆ ತಪಾಸಣೆಗೊಳಗಾಗಿದ್ದ ಪಟ್ಟಣದ ಖಾಸಗಿ ಆಸ್ಪತ್ರೆಯೊಂದನ್ನೂ ಸೀಲ್‍ಡೌನ್ ಮಾಡಲಾಗಿದೆ. ಅಲ್ಲದೇ ವೃದ್ಧೆಯ ಮನೆಯಲ್ಲಿದ್ದ 10 ಮಂದಿ ಹಾಗೂ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಸೇರಿ 28 ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಅಲ್ಲದೇ ವೃದ್ಧೆಯ ಸ್ವಂತ ಊರಾದ ಬಾಳೆಹೊನ್ನೂರು ಸಮೀಪದ ಗ್ರಾಮವೊಂದರಲ್ಲಿರುವ ವೃದ್ಧೆಯ ಮನೆಯನ್ನೂ ಸೀಲ್ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಆ ಮನೆಯಲ್ಲಿದ್ದ ಸದಸ್ಯರನ್ನೂ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.

ಕಳಸ ಪಟ್ಟಣದಲ್ಲಿ ವೃದ್ಧೆಯ ಪ್ರಾಥಮಿಕ ಸಂಪರ್ಕಗಳಾದ ಒಟ್ಟು 38 ಮಂದಿಯ ರಕ್ತ ಹಾಗೂ ಗಂಟಲದ್ರವದ ಮಾದರಿಯನ್ನು ಕಳಸ ಸಮೀಪದ ಬಾಳೆಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂಗ್ರಹಿಸಲಾಗಿದ್ದು, ಇದನ್ನು ಶಿವಮೊಗ್ಗ ನಗರದ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಸೋಮವಾರ ಇಲ್ಲವೇ ಮಂಗಳವಾರ ಕಳಸ ಪಟ್ಟಣದಲ್ಲಿನ ವೃದ್ಧೆಯ ಪ್ರಾಥಮಿಕ ಸಂಪರ್ಕಗಳ ಪ್ರಯೋಗಾಲಯದ ವರದಿ ಬರಲಿದೆ ಎಂದು ತಿಳಿದು ಬಂದಿದೆ.

ಕಳಸ ಪಟ್ಟಣದಲ್ಲಿ ಕೊರೋನ ಸೋಂಕಿತ ವೃದ್ಧೆ ಎರಡು ತಿಂಗಳಿನಿಂದ ಸಂಬಂಧಿಗಳ ಮನೆಯಲ್ಲಿ ತಂಗಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕರು ಭಾರೀ ಆತಂಕಕ್ಕೊಳಗಾಗಿದ್ದು, ಸೋಂಕು ಪಟ್ಟಣದಲ್ಲಿ ಎಷ್ಟು ಮಂದಿಗೆ ಹರಡಿದೆಯೋ ಎಂಬ ಭೀತಿಯಿಂದಾಗಿ ಮನೆಗಳಿಂದ ಹೊರ ಬರಲೂ ಹಿಂದೆಮುಂದೆ ನೋಡುವಂತಾಗಿದೆ.

ಕಳಸ ಪಟ್ಟಣದಲ್ಲಿ ಸಂಬಂಧಿಕರ ಮನೆಗೆ ಎರಡು ತಿಂಗಳ ಹಿಂದೆ ಭೇಟಿ ನೀಡಿ ಅಲ್ಲೇ ತಂಗಿದ್ದ ವೃದ್ಧೆಗೆ ಕೊರೋನ ಪಾಸಿಟಿವ್ ಇರುವುದು ಶಿವಮೊಗ್ಗದಲ್ಲಿ ಪತ್ತೆಯಾಗಿದೆ. ಆದ್ದರಿಂದ ಈ ಪ್ರಕರಣ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಸೇರಿದ್ದಾಗಿದೆ. ಆದರೆ ವೃದ್ಧೆ ತಂಗಿದ್ದ ಮನೆ ಹಾಗೂ ತಪಾಸಣೆಗೊಳಗಾಗಿದ್ದ ಖಾಸಗಿ ಆಸ್ಪತ್ರೆ ಕಳಸ ಪಟ್ಟಣದಲ್ಲಿದ್ದು, ಮನೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಖಾಸಗಿ ಆಸ್ಪತ್ರೆಯನ್ನು ರವಿವಾರ, ಸೋಮವಾರ ಮಾತ್ರ ಸೀಲ್‍ಡೌನ್ ಮಾಡಲಾಗುವುವು. ವೃದ್ಧೆ ತಂಗಿದ್ದ ಮನೆಯ ಸದಸ್ಯರ ಸ್ವಾಬ್ ಸಂಗ್ರಹಿಸಿ ಲ್ಯಾಬ್ ಕಳುಹಿಸಲಾಗಿದೆ. ಆಸ್ಪತ್ರೆ ಸಿಬ್ಬಂದಿ, ಮನೆಯ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ.
- ಡಾ.ಪ್ರೇಮ್‍ಕುಮಾರ್, ಆರೋಗ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ, ಕಳಸ

ವೃದ್ಧೆಯ ಪ್ರಾಥಮಿಕ ಸಂಪರ್ಕದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿ

ಶಿವಮೊಗ್ಗದಿಂದ ಕಳಸ ಪಟ್ಟಣಕ್ಕೆ ಬಂದು ತನ್ನ ಮಗಳ ಮನೆಯಲ್ಲಿ ಕಳೆದ ಎರಡು ತಿಂಗಳಿನಿಂದ ವಾಸವಿದ್ದ ವೃದ್ಧೆಯಲ್ಲಿ ಪಾಸಿಟಿವ್ ಇರುವುದು ಶಿವಮೊಗ್ಗದ್ದಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಳಸ ಪಟ್ಟಣದಲ್ಲಿ ವೃದ್ಧೆಯ ಸಂಬಂಧಿಕರ ಪೈಕಿ 10 ಮಂದಿಯನ್ನು ಕ್ವಾರಂಟೈನ್ ಮಾಡಿ ಸ್ವಾಬ್ ಸಂಗ್ರಹ ಮಾಡಲಾಗಿದೆ. ಈ 10 ಮಂದಿಯಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಯೊಬ್ಬ ಇದ್ದು, ಈತ ಇತ್ತೀಚೆಗೆ ಪಟ್ಟಣದ ಪರೀಕ್ಷಾ ಕೇಂದ್ರದಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನೂ ಬರೆದಿದ್ದಾನೆ. ಪರೀಕ್ಷೆಗೂ ಮುನ್ನ ಈ ವಿದ್ಯಾರ್ಥಿ ಕೆಲ ಶಿಕ್ಷಕರಿಂದ ಟ್ಯೂಶನ್ ಪಡೆದಿದ್ದು, ಈ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದವರು ಇದೀಗ ಆತಂಕದಲ್ಲಿ ದಿನಕಳೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News