ಸವಾಲು ಹಾಕಿ ಕೊನೆಗೆ ಜೈಲು ಪಾಲಾದ ಗಣಿದೊರೆಗಳನ್ನು ಮರೆಯಬೇಡಿ: ಶ್ರೀರಾಮುಲುಗೆ ಸಿದ್ದರಾಮಯ್ಯ ಚಾಟಿ

Update: 2020-07-05 13:39 GMT

ಬೆಂಗಳೂರು, ಜು.5: ಕೋವಿಡ್-19 ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ. ಅದೇ ರೀತಿ ಸವಾಲು ಹಾಕಿದ ಬಳ್ಳಾರಿಯ ಗಣಿ ದೊರೆಗಳ ಪರಿಸ್ಥಿತಿ ಏನಾಯಿತೆಂದು ಒಮ್ಮೆ ಅವರು ನೆನೆಸಿಕೊಳ್ಳಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಗಣಿಗಾರಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಬಳ್ಳಾರಿಯ ಗಣಿದೊರೆಗಳು ಸಚಿವ ಶ್ರೀರಾಮುಲು ರೀತಿಯಲ್ಲಿಯೇ ದಾಖಲೆ ಬಿಡುಗಡೆಗೆ ಸವಾಲು ಹಾಕಿದ್ದರು. ಕೊನೆಗೆ ದಾಖಲೆ ಬಿಡುಗಡೆಯಾದ ನಂತರ ಜೈಲು ಪಾಲಾದರು. ಹೀಗಾಗಿ ಶ್ರೀರಾಮುಲು ಸವಾಲು ಹಾಕುವ ಮುನ್ನ ಇದನ್ನು ಮರೆಯಬಾರದೆಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ವ್ಯಾಪಕವಾಗುತ್ತಿರುವ ಕೋವಿಡ್-19 ನಿಯಂತ್ರಣ ಸಂಬಂಧ ಮೂವರು ಸಚಿವರನ್ನು ಉಸ್ತುವಾರಿಗೆ ನೇಮಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪರವರ ಈ ಕ್ರಮ ಸೋಂಕು ಪೀಡಿತರಿಗೆ ನೆರವಾಗಲಿಕ್ಕಾ, ಇಲ್ಲವೇ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಲಿಕ್ಕಾ ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೋನ ಸೋಂಕಿನ ನಿಯಂತ್ರಣಕ್ಕೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ರಾಜ್ಯಕ್ಕೆ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ ಎಂದು ವಿಚಾರಿಸಬೇಕಿತ್ತಲ್ಲವೇ. ಅವರು ಈ ಸಂಬಂಧ ಸುಳ್ಳು ಆಶ್ವಾಸನೆಗಳನ್ನು ನೀಡಿದ್ದರು, ನೊಂದ ಜನರಿಗೆ ಸ್ವಲ್ವ ನೆಮ್ಮದಿ ಸಿಗುತ್ತಿತ್ತೆಂದು ಅವರು ಟೀಕಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಸಕಾಲಕ್ಕೆ ಆಂಬುಲೆನ್ಸ್ ಸಿಗದೆ ಸಾವನ್ನಪ್ಪಿದ ಕೊರೋನ ಸೋಂಕಿತರ ಮನೆಗಳಿಗೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತೆರಳಿ ಕ್ಷಮೆ ಯಾಚಿಸುತ್ತಿರುವ ಕ್ರಮ ಎಲ್ಲ ಅಧಿಕಾರಿಗಳಿಗೂ ಮಾದರಿಯಾಗಿದೆ. ಜನತೆ ಅಧಿಕಾರಿಗಳಿಂದ ನಿರೀಕ್ಷಿಸುವುದು ಇಂತಹ ಅಂತಃಕರಣದ ಮಾನವೀಯತೆಯಾಗಿದೆ.

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News