ಲಾಕ್‍ಡೌನ್ ನಿಂದ ಕರ್ನಾಟಕ ಅಕ್ಷರಶಃ ಸ್ತಬ್ಧ: ಬಿಕೋ ಎನ್ನುತ್ತಿದ್ದ ರಸ್ತೆಗಳು, ಮನೆಗಳಲ್ಲೇ ಉಳಿದ ಜನತೆ

Update: 2020-07-05 13:47 GMT

ಬೆಂಗಳೂರು, ಜು. 5: ಮಾರಕ ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿದ್ದ 'ರವಿವಾರ ಸಂಪೂರ್ಣ ಲಾಕ್‍ಡೌನ್'ಗೆ ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು, ಕರಾವಳಿಯ ದಕ್ಷಿಣ ಕನ್ನಡ, ಬೆಳಗಾವಿ, ಕಲ್ಯಾಣ ಕರ್ನಾಟಕದ ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಕೆಎಸ್ಸಾರ್ಟಿಸಿ, ಬಿಎಂಟಿಸಿ, ಆಟೋರಿಕ್ಷಾ, ಟ್ಯಾಕ್ಸಿ ಸೇರಿದಂತೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಬಸ್ ಹಾಗೂ ರೈಲ್ವೆ ನಿಲ್ದಾಣಗಳು, ಪ್ರಮುಖ ವೃತ್ತಗಳು, ರಾಷ್ಟ್ರಿಯ ಹೆದ್ದಾರಿಗಳು ಸೇರಿದಂತೆ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಆಂಬ್ಯುಲೆನ್ಸ್, ಆಸ್ಪತ್ರೆ, ಹಾಲು, ಪೇಪರ್, ದಿನಸಿ, ಮಾಂಸ, ಹಣ್ಣು, ತರಕಾರಿ ಹಾಗೂ ತುರ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆಲ್ಲ ವ್ಯಾಪಾರ, ವಹಿವಾಟನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.

ನಿನ್ನೆ ರಾತ್ರಿಯಿಂದಲೇ ತಮ್ಮ ತಮ್ಮ ಊರುಗಳಿಗೆ ಹೊರಟವರು ಮತ್ತು ಹೊರಗಿನಿಂದ ಬೆಂಗಳೂರು ನಗರಕ್ಕೆ ಆಗಮಿಸಿದ್ದ ಸಾರ್ವಜನಿಕ ಪ್ರಯಾಣಿಕರು ತಮ್ಮ ಮನೆಗಳಿಗೆ ತಲುಪಲು ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದೆ ತೀವ್ರ ತೊಂದರೆ ಅನುಭವಿಸಿದರು. ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನ ಮತ್ತು ಅಲ್ಲಲ್ಲಿ ಆಟೋರಿಕ್ಷಾ ಸಂಚಾರ ವಿರಳ ಸಂಖ್ಯೆಯಲ್ಲಿತ್ತು. ಬೆಂಗಳೂರು ನಗರದಲ್ಲಿ ಲಾಕ್‍ಡೌನ್ ಸಂಪೂರ್ಣ ಯಶಸ್ವಿಯಾಗಿತ್ತು.

ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕೆ.ಆರ್.ಮಾರುಕಟ್ಟೆ, ಶಿವಾಜಿನಗರ ಮಾರುಕಟ್ಟೆ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಜೊತೆಗೆ ಮಲ್ಲೇಶ್ವರಂ, ಯಶವಂತಪುರ, ಜಯನಗರ, ದಾಸರಹಳ್ಳಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳು ಬೆಳಗ್ಗೆ ವಹಿವಾಟಿನ ಬಳಿಕ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿತ್ತು.

ಮಾಂಸ ಖರೀದಿಗೆ ಮುಗಿಬಿದ್ದ ಜನ: ಬೆಂಗಳೂರು ಸೇರಿ ಕೊರೋನ ಪ್ರಕರಣಗಳ ಹೆಚ್ಚಿರುವ ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಕಲಬುರಗಿ, ಬೀದರ್ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಾಂಸ, ಹಣ್ಣು, ತರಕಾರಿ ಹಾಗೂ ದಿನಸಿ ಖರೀದಿಗೂ ನಿರ್ಬಂಧ ಹೇರಲಾಗಿತ್ತು. ಆದರೆ, ರಾಜಧಾನಿ ಬೆಂಗಳೂರು ನಗರದಲ್ಲಿ ಅಗತ್ಯ ವಸ್ತುಗಳಡಿಯಲ್ಲಿ ಮೀನು, ಮಾಂಸ, ಮೊಟ್ಟೆ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಾರ್ಗಸೂಚಿ ಉಲ್ಲಂಘಿಸಿ ಮಾಂಸ ಖರೀದಿಗೆ ಮುಗಿಬಿದ್ದ ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲಿ ಉದ್ಯಾನವನಗಳನ್ನು ಬಂದ್ ಮಾಡಲಾಗಿದ್ದರೂ, ಬೆಳಗಿನ ಜಾವದಿಂದಲೇ ಬೆಂಗಳೂರಿನ ಲಾಲ್‍ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ಪ್ರಮುಕ ಉದ್ಯಾನವನಗಳ ಹೊರಭಾಗದಲ್ಲಿ ಸಾರ್ವಜನಿಕರು ವಾಯು ವಿಹಾರ, ವ್ಯಾಯಾಮ ಮಾಡುತ್ತಿದುದು ಕಂಡು ಬಂತು. ಕೆಲವಡೆ ಕಲಂ 144ರ ಅನ್ವಯ ನಿಷೇಧಾಜ್ಞೆ, ಕಫ್ರ್ಯೂ ವಿಧಿಸಿದ್ದರಿಂದ ಸಾರ್ವಜನಿಕರು ಮನೆಗಳಲ್ಲಿ ಉಳಿದಿದ್ದರು.

ರವಿವಾರ ಲಾಕ್‍ಡೌನ್ ನಡುವೆಯೇ ಉದ್ಯಾನನಗರಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣವಿತ್ತು. ಎಂಟು ಗಂಟೆಯ ಸುಮಾರಿಗೆ ಜಿಟಿಜಿಟಿ ಮಳೆಬಿದ್ದ ಕಾರಣ ಹೊರಗೆ ತೆರಳುವ ಇರಾದೆಯಲ್ಲಿದ್ದ ಜನರು ಮನೆಯಲ್ಲೆ ಇದ್ದರು. ರಾಜ್ಯಾದ್ಯಂತ ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಮನೆಯಲ್ಲೆ ಉಳಿದ ಸಿಎಂ-ಸಚಿವರು

ಮುಖ್ಯಮಂತ್ರಿ ಯಡಿಯೂರಪ್ಪ, ಸಂಪುಟದ ಕೆಲ ಸಚಿವರನ್ನು ಹೊರತುಪಡಿಸಿದರೆ ಬಹುತೇಕ ಸಹೋದ್ಯೋಗಿಗಳು, ಶಾಸಕರು ರವಿವಾರ ಲಾಕ್‍ಡೌನ್ ಹಿನ್ನೆಲೆಯಲ್ಲೇ ಉಳಿದಿದ್ದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಲ್ಲಿನ ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.

ಊರು ತೊರೆಯುತ್ತಿರುವ ಜನ

ಬೆಂಗಳೂರು ನಗರದಲ್ಲಿ ಒಂದು ವಾರದಿಂದ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರ ಮಧ್ಯೆ ಸಾವಿನ ಸಂಖ್ಯೆಯೂ ಅಧಿಕವಾಗುತ್ತಿರುವುದರಿಂದ ಆತಂಕಗೊಂಡಿರುವ ಬೆಂಗಳೂರಿನಲ್ಲಿ ನೆಲೆಸಿರುವ ಜನರು ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುತ್ತಿದ್ದು, ಅವರನ್ನು ನಗರದಲ್ಲೇ ಉಳಿಸಿಕೊಳ್ಳಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News