ದಾವಣಗೆರೆ: ಲಾಕ್‍ಡೌನ್ ಆದೇಶ ಉಲ್ಲಂಘಿಸಿ ಪಾಲಿಕೆಯಲ್ಲಿ ಹುಟ್ಟುಹಬ್ಬ ಆಚರಿಸಿದ ಮೇಯರ್

Update: 2020-07-05 16:06 GMT

ದಾವಣಗೆರೆ, ಜು.5: ರಾಜ್ಯ ಸರಕಾರದ ಲಾಕ್‍ಡೌನ್ ಆದೇಶದ ಉಲ್ಲಂಘಿಸಿ ಪಾಲಿಕೆ ಕಚೇರಿಯಲ್ಲಿ ಮೇಯರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ವೇಳೆ ಸುರಕ್ಷಿತ ಅಂತರ ಪಾಲಿಸಿಲ್ಲ ಮತ್ತು ಯಾರೂ ಕೂಡಾ ಮಾಸ್ಕ್ ಧರಿಸಿರಲಿಲ್ಲ ಎಂದು ತಿಳಿದುಬಂದಿದೆ.

ರಾಜ್ಯ ಸರಕಾರ ಕೋರೋನ ಸೋಂಕು ನಿಯಂತ್ರಣಕ್ಕಾಗಿ ರವಿವಾರ ಸಂಪೂರ್ಣ ಲಾಕ್‍ಡೌನ್ ಘೋಷಿಸಿದೆ. ಅದರೆ ಪಾಲಿಕೆಯಲ್ಲಿ ಬಿಜೆಪಿಯ ಪಾಲಿಕೆ ಸದಸ್ಯರು ಹಾಗೂ ಅಭಿಮಾನಿಗಳ ಜೊತೆ ಸೇರಿ ಮೇಯರ್ ಅಜಯಕುಮಾರ್ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಮೂಲಕ ಸಂಪೂರ್ಣ ಸರಕಾರದ ಆದೇಶದ ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ.

ಸಂಪೂರ್ಣ ಲಾಕ್‍ಡೌನ್ ನಡುವೆ ಹುಟ್ಟುಹಬ್ಬ ಆಚರಣೆ ಬೇಕಿತ್ತೇ ಎಂದು ಸಾಮಾಜಿಕ ಜಾಲತಾಣದಲ್ಲಿ ಮೇಯರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಜನಸಾಮಾನ್ಯರಿಗೆ ಒಂದು ನ್ಯಾಯ, ಉಳ್ಳವರಿಗೆ ಒಂದು ನ್ಯಾಯನಾ, ಮೇಯರ್ ಗೆ ಸರ್ಕಾರದ ಕಾನೂನುಗಳು ಅನ್ವಯವಾಗುವುದಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.   

ವಿಪತ್ತು ನಿರ್ವಹಣಾ ಕಾಯ್ದೆ ಅಡಿ ದೂರು
ನಗರದ ಪ್ರಥಮ ಪ್ರಜೆ ಅಜಯ್ ಕುಮಾರ್ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆಯಲ್ಲಿ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಲು ತಿರ್ಮಾನಿಸಲಾಗಿದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.  

ಜನ್ಮದಿನ ಆಚರಣೆ ಹಿನ್ನಲೆಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಮೊದಲಿಗೆ ಘಟನೆ ಬಗ್ಗೆ ಮಾಹಿತಿ ಪಡೆದು ನಂತರ ಖಾಸಗಿ ದೂರು ದಾಖಲಿಸಬೇಕಾಗುತ್ತದೆ. ಎನ್‍ಡಿಎಂಎ ಕಾಯ್ದೆ ಐಪಿಸಿ ಸೆಕ್ಸನ್ 188 ಅಡಿ ಪ್ರಕರಣ ದಾಖಲಾಗಲಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News