ಬಸ್ ನಿಲ್ದಾಣದಲ್ಲಿ ಪತ್ತೆಯಾದ ಕೊರೋನ ಶಂಕಿತನ ಮೃತದೇಹ

Update: 2020-07-05 17:05 GMT
ಸಾಂದರ್ಭಿಕ ಚಿತ್ರ

ಹಾವೇರಿ, ಜು.5: ಶಂಕಿತ ಕೊರೋನ ವ್ಯಕ್ತಿಯ ಮೃತದೇಹವನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಬಸ್ ನಿಲ್ದಾಣದಲ್ಲಿಯೇ ಬಿಟ್ಟು ಹೋಗಿರುವ ಘಟನೆ ನಡೆದಿದ್ದು, ಸಾರ್ವಜನಿಕರ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಮೃತದೇಹವನ್ನು ರಾಣೆಬೆನ್ನೂರು ತಾಲೂಕು ಆಸ್ಪತ್ರೆಯ ಸಿಬ್ಬಂದಿಯೇ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

3 ದಿನಗಳಿಂದ ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದ ರಾಣೆಬೆನ್ನೂರು ನಗರ ನಿವಾಸಿ ಚಂದ್ರಶೇಖರ್(40) ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಿದ್ದರು. ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೇ ವೇಳೆಯಲ್ಲಿ ಚಿಕಿತ್ಸೆ ಫಲಿಸದೆ ಚಂದ್ರಶೇಖರ್ ಮೃತಪಟ್ಟಿದ್ದು, ಬಳಿಕ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿದ್ದ ಅವರ ಮೃತದೇಹ ಪಕ್ಕದಲ್ಲೇ ಇರುವ ಬಸ್ ನಿಲ್ದಾಣದಲ್ಲಿ ಕಂಡು ಬಂದಿತ್ತು.

ಈ ಬಗ್ಗೆ ವೈದ್ಯರನ್ನು ಕೇಳಿದರೆ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಮೃತನ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ ಎನ್ನುತ್ತಾರೆ. ಆದರೆ ಕೊರೋನ ವರದಿ ಬರುವ ಮೊದಲೇ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರಿಸಿದ್ದು ಯಾಕೆ ಎಂಬ ಪ್ರಶ್ನೆ ಉದ್ಭವಿಸಿದ್ದು, ಇದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಉತ್ತರ ನೀಡಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ತಾಲೂಕು ವೈದ್ಯಾಧಿಕಾರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಹಾವೇರಿ ಡಿಎಚ್‍ಒ ಡಾ.ರಾಜೇಂದ್ರ ದೊಡ್ಮನಿ ಅವರು ಹೇಳಿದ್ದಾರೆ.

ತನಿಖೆಗೆ ಆದೇಶ

ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಶವ ಇಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಏನು ಲೋಪವಾಗಿದೆ ಎಂಬುದರ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾರಾದರೂ ಮೃತಪಟ್ಟರೆ ರಾಜ್ಯ ಸರಕಾರ ಹೊರಡಿಸಿರುವ ಎಸ್‍ಒಪಿ ಮಾರ್ಗಸೂಚಿಯಂತೆಯೇ ಅಂತ್ಯಸಂಸ್ಕಾರ ಮಾಡುವಂತೆ ತಾಕೀತು ಮಾಡಲಾಗಿದೆ.’

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News