ಬೆಂಗಳೂರು ಸೇರಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ, ಭಯಬೇಡ: ಸಚಿವ ಡಾ.ಸುಧಾಕರ್

Update: 2020-07-05 17:26 GMT

ಬೆಂಗಳೂರು, ಜು.5: ರಾಜ್ಯ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿದ್ದು ಜನರು ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಯ ನೀಡಿದ್ದಾರೆ.

ರವಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಲ ಮಾಧ್ಯಮಗಳ ವರದಿಗಳಿಂದ ಜನರು ಭಯಬೀತರಾಗಿದ್ದಾರೆ. ಇದೊಂದು ಮಾರಣಾಂತಿಕ ರೋಗ ಎಂಬ ಭೀತಿಯಲ್ಲಿ ಅನೇಕರು ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಒಳಗಾಗಿದ್ದಾರೆ. ಅಂತಹ ಆತಂಕಕಾರಿ ಪರಿಸ್ಥಿತಿ ಇಲ್ಲ ಎಂದರು.

ಜಗತ್ತಿನಾದ್ಯಂತ 1,13,87,499 ಮಂದಿ ಸೋಂಕಿತರಿದ್ದಾರೆ. ಇದರಲ್ಲಿ 64,45,410 ಮಂದಿ ಗುಣಮುಖರಾಗಿದ್ದಾರೆ, ಶೇಕಡವಾರು ಪ್ರಮಾಣ 56.60 ಇದೆ. 5,33,621 ಮಂದಿ ಸಾವಿಗೀಡಾಗಿದ್ದಾರೆ, ಸಾವಿನ ಶೇಕಡಾವಾರು ಪ್ರಮಾಣ 4.68 ರಷ್ಟಿದೆ. ಭಾರತದಲ್ಲಿ 6,74,313 ಸೋಂಕಿತರಿದ್ದು, ಶೇಕಡಾ 60.67 ರಷ್ಟು ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ ಶೇಕಡಾ 2.86ರಷ್ಟಿದೆ. ಆದರೆ ರಾಜ್ಯದಲ್ಲಿ ಇದು ರಾಷ್ಟ್ರದ ಪ್ರಮಾಣಕ್ಕಿಂತ ಕಡಿಮೆ. ನಮ್ಮಲ್ಲಿ ಸಾವಿನ ಪ್ರಮಾಣ ಶೇಕಡಾ 1.55 ರಷ್ಟಿದೆ. ಇನ್ನೂ ದೇಶದ ಮಹಾನಗರಗಳಾದ ದಿಲ್ಲಿ, ಮುಂಬೈ, ಚೆನ್ನೈಗಳಿಗೆ ಹೋಲಿಕೆ ಮಾಡಿದಾಗ ಬೆಂಗಳೂರು ನಗರದಲ್ಲಿ ಮರಣ ಪ್ರಮಾಣ ಶೇ.1.46ರಷ್ಟು. ಹೀಗಾಗಿ ಯಾರೊಬ್ಬರು ಭಯ ಪಡಬೇಕಿಲ್ಲ ಎಂದು ವಿವರಿಸಿದರು.

ಹತ್ತು ದಿನಗಳಿಂದ ಈಚೆಗೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಚಿಕಿತ್ಸೆ ನೀಡಲು ಮತ್ತು ನಿಗಾ ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಗರದ ವಾರ್ಡ್ ನಿಂದ ಗ್ರಾಮದ ಹಂತದವರೆಗೆ ಕಾರ್ಯಪಡೆಗಳನ್ನು ರಚಿಸಲಾಗಿದೆ. ಇದರ ಉಸ್ತುವಾರಿಗಾಗಿಯೇ ಹಿರಿಯ ಅಧಿಕಾರಿ ಎಲ್.ಕೆ.ಅತೀಕ್ ಅವರನ್ನು ನಿಯೋಜಿಸಲಾಗಿದೆ. ಈ ಸಮಿತಿಗಳು ಹೊಸದಾಗಿ ಹೊರಡಿಸಿರುವ ಮಾರ್ಗಸೂಚಿ ಅನ್ವಯ ರೋಗ ಲಕ್ಷಣ ಇಲ್ಲದ ರೋಗಿಗಳ ಕ್ವಾರಂಟೈನ್ ವ್ಯವಸ್ಥೆ, ಜ್ವರ ಲಕ್ಷಣ ಇರುವವರು, ಇತರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರೀಕರನ್ನು ಗುರುತಿಸಿ ಟೆಸ್ಟ್‍ ಗೆ ಒಳಪಡಿಸುವ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News