ವಿಶೇಷ ಪ್ಯಾಕೇಜ್: ಸಹಾಯಧನಕ್ಕಾಗಿ ಇದುವರೆಗೂ 1.16 ಲಕ್ಷ ಜನರಿಂದ ಅರ್ಜಿ ಸಲ್ಲಿಕೆ

Update: 2020-07-05 18:21 GMT

ಬೆಂಗಳೂರು, ಜು.5: ರಾಜ್ಯದಲ್ಲಿ ಕೊರೋನ ನಿಯಂತ್ರಿಸುವ ಸಲುವಾಗಿ ಲಾಕ್‍ಡೌನ್ ಘೋಷಿಸಿದ್ದ ಸರಕಾರ ಅನ್‍ಲಾಕ್ ಘೋಷಿಸಿದ ನಂತರ ಆದಾಯವಿಲ್ಲದೇ ಕಂಗೆಟ್ಟಿದ್ದ ವಿವಿಧ ಸಮುದಾಯದವರಿಗೆ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಅದರಲ್ಲಿ ಸಹಾಯಧನಕ್ಕಾಗಿ ರಾಜ್ಯಾದ್ಯಂತ ಸುಮಾರು 1.16 ಲಕ್ಷಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದಾರೆ. ಜುಲೈ ಅಂತ್ಯದೊಳಗೆ ಅಂತ್ಯದೊಳಗೆ ಅರ್ಹ ಫಲಾನುಭವಿಗಳಿಗೆ ಸಹಾಯಧನ ಸಿಗಲಿದೆ.

ಜೂ. 10ರಿಂದ ಜು. 4 ರವರೆಗೆ 58,061 ಕ್ಷೌರಿಕರು, 57,411 ಅಗಸರು ಸಹಾಯಧನಕ್ಕಾಗಿ ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆ ಗುರುತಿಸಿದಂತೆ ರಾಜ್ಯದಲ್ಲಿ ಸುಮಾರು 2.30 ಲಕ್ಷ ಕ್ಷೌರಿಕರು ಹಾಗೂ 60 ಸಾವಿರ ಅಗಸರಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಸುಮಾರು 2 ಲಕ್ಷ ಇದ್ದಾರೆ ಎಂದು ಅಂದಾಜಿಸಲಾಗಿದೆ. ಈಗಾಗಲೇ 1.16 ಲಕ್ಷ ಅರ್ಜಿಗಳು ಬಂದಿದ್ದು, ಜು. 10ರೊಳಗೆ 2 ಲಕ್ಷ ಅರ್ಜಿಗಳು ಸಲ್ಲಿಕೆಯಾಗಲಿವೆ ಎಂದು ಕಾರ್ಮಿಕ ಇಲಾಖೆ ನಿರೀಕ್ಷಿಸಿದೆ.

ಕೊರೋನ ವೈರಸ್ ಲಾಕ್‍ಡೌನ್‍ನಿಂದ ಕಾರ್ಮಿಕವರ್ಗ ಸಂಕಷ್ಟಕ್ಕೆ ಸಿಲುಕಿತ್ತು. ಸುಮಾರು ಎರಡೂವರೆ ತಿಂಗಳು ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದ್ದರಿಂದ ಶ್ರಮಿಕವರ್ಗ ಆದಾಯವಿಲ್ಲದೇ ಕಷ್ಟ ಅನುಭವಿಸಿದರು. ಈ ಹಿನ್ನೆಲೆ ರಾಜ್ಯ ಸರಕಾರದಿಂದ ಆರ್ಥಿಕ ಪ್ಯಾಕೇಜ್ ಘೋಷಿಸಿತ್ತು.

ಜಿಲ್ಲಾವಾರು ಅರ್ಜಿಗಳ ಮಾಹಿತಿ:

ಬೆಳಗಾವಿ 7558, ಬೆಂಗಳೂರು ಗ್ರಾಮಾಂತರ 7952, ಕಲಬುರಗಿ 5231, ವಿಜಯಪುರ 4007, ಬಳ್ಳಾರಿ 9551, ಮೈಸೂರು 6252, ರಾಯಚೂರು 7438, ತುಮಕೂರು 6343, ಕೊಪ್ಪಳ 4317, ಬಾಗಲಕೋಟೆ 2994, ಚಿಕ್ಕಬಳ್ಳಾಪುರ 4671, ಮಂಡ್ಯ 5045, ಕೋಲಾರ 3841, ಹಾವೇರಿ 3671, ಧಾರವಾಡ 3585, ಗದಗ 2877, ಬೀದರ್ 3358, ಚಿತ್ರದುರ್ಗ 4441, ಹಾಸನ 2547, ದಾವಣಗೆರೆ 3387, ಶಿವಮೊಗ್ಗ 2173, ಯಾದಗಿರಿ 3178, ಬೆಂಗಳೂರು ನಗರ 4726, ಚಾಮರಾಜನಗರ 2887, ಚಿಕ್ಕಮಗಳೂರು 1343, ರಾಮನಗರ 1956, ಉತ್ತರ ಕನ್ನಡ 1366, ಉಡುಪಿ 1071, ದಕ್ಷಿಣ ಕನ್ನಡ 1023, ಕೊಡಗು 548 ಜನರು ಜುಲೈ 4 ರವರೆಗೆ ಸೇವಾ ಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆ ಬೇಕು?: 18ರಿಂದ 65 ವರ್ಷದೊಳಗಿನ, ಬಡತನ ರೇಖೆಗಿಂತ ಕೆಳಗಿರುವವರು ವಿಳಾಸ ದೃಢೀಕರಣ ಪತ್ರ, ಬ್ಯಾಂಕ್ ಪಾಸ್‍ಬುಕ್, ಬಿಪಿಎಲ್ ದಾಖಲೆ, ಉದ್ಯೋಗ ಪ್ರಮಾಣಪತ್ರದೊಂದಿಗೆ ಮೊಬೈಲ್ ನಂಬರ್ ಅನ್ನು ಕಡ್ಡಾಯವಾಗಿ ಅಪ್‍ಲೋರ್ಡ್ ಮಾಡಬೇಕು. ಉದ್ಯೋಗ ಪ್ರಮಾಣಪತ್ರವನ್ನು ತಹಶೀಲ್ದಾರ್, ಉಪ ತಹಶೀಲ್ದಾರ್, ಕಂದಾಯಾಧಿಕಾರಿ, ಕಂದಾಯ ನಿರೀಕ್ಷಕರು, ಕಾರ್ಮಿಕ ಇಲಾಖೆ ಅಧಿಕಾರಿಗಳು, ಪಿಡಿಒಗಳಿಂದ ಪಡೆಯಬಹುದು. ಪರವಾನಗಿ ಪಡೆದು ವೃತ್ತಿ ನಡೆಸುತ್ತಿರುವ ಸಂಸ್ಥೆಯ ನಾಲ್ಕು ಕಾರ್ಮಿಕರು ಹಾಗೂ ಪರವಾನಗಿ ಪಡೆಯದ ಸಂಸ್ಥೆಯ ಇಬ್ಬರು ಕಾರ್ಮಿಕರು ಅರ್ಜಿ ಸಲ್ಲಿಸಬಹುದು.

ಜಿಲ್ಲಾ ಕೇಂದ್ರಗಳಲ್ಲಿ ಅರ್ಜಿಗಳ ಪರಿಶೀಲನೆ ಕಾರ್ಯ ಆರಂಭ

ಪರಿಹಾರ ಕೋರಿ ಸಲ್ಲಿಸಿದ ಅರ್ಜಿಗಳನ್ನು ಜಿಲ್ಲಾಮಟ್ಟದ ಸಮಿತಿ ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಂಡು ಕಾರ್ಮಿಕ ಇಲಾಖೆಗೆ ಕಳುಹಿಸಲಿದೆ. ಈಗಾಗಲೇ ಪರಿಶೀಲನಾ ಕಾರ್ಯ ಆರಂಭವಾಗಿದ್ದು, 1.14 ಲಕ್ಷ ಅರ್ಜಿಗಳಲ್ಲಿ 13820 ಅರ್ಜಿಗಳನ್ನು ಆಯ್ಕೆ ಮಾಡಲಾಗಿದೆ. 404 ಅರ್ಜಿಗಳನ್ನು  ರದ್ದುಗೊಳಿಸಲಾಗಿದೆ. ಉಳಿದ 1.01 ಲಕ್ಷ ಅರ್ಜಿಗಳು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂ. 10 ರಿಂದ ಕ್ಷೌರಿಕರು ಹಾಗೂ ಅಗಸರು ಸಹಾಯಧನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. 2 ಲಕ್ಷ ಅರ್ಜಿಗಳು ಸಲ್ಲಿಕೆಯಾಗುವ ನಿರೀಕ್ಷೆ ಇದ್ದು, ಅರ್ಜಿಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಈ ತಿಂಗಳಾಂತ್ಯದೊಳಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಹಾಯಧನ ಜಮೆಯಾಗಲಿದೆ.

-ಅಕ್ರಂ ಪಾಷ, ಕಾರ್ಮಿಕ ಇಲಾಖೆಯ ಆಯುಕ್ತ

Writer - -ಬಾಬುರೆಡ್ಡಿ ಚಿಂತಾಮಣಿ

contributor

Editor - -ಬಾಬುರೆಡ್ಡಿ ಚಿಂತಾಮಣಿ

contributor

Similar News