ಆರೋಪ ಮಾಡುವುದನ್ನು ಬಿಟ್ಟು ಸಿದ್ದರಾಮಯ್ಯ ದಾಖಲೆಗಳನ್ನು ಪರಿಶೀಲಿಸಲಿ: ಸಿಎಂ ಬಿಎಸ್‌ವೈ ತಿರುಗೇಟು

Update: 2020-07-06 12:16 GMT

ಬೆಂಗಳೂರು, ಜು. 6: ಕೊರೋನ ವೈರಸ್ ಸೋಂಕು ತಡೆಗಟ್ಟಲು ರಾಜ್ಯ ಸರಕಾರ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆಸಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಆರೋಪಕ್ಕೆ ಸಂಬಂಧಿಸಿದಂತೆ ಮೌನ ಮುರಿದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವೈದ್ಯಕೀಯ ಉಪಕರಣ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ಉಪಕರಣಗಳ ಬಗ್ಗೆ ಸಿದ್ದರಾಮಯ್ಯನವರಿಗೆ ಸಂಶಯವಿದ್ದರೆ ಖುದ್ದು ಅವರೇ ವಿಧಾನಸೌಧಕ್ಕೆ ಬಂದು ದಾಖಲೆಗಳನ್ನು ಪರಿಶೀಲಿಸಲಿ. ಅದಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಸವಾಲು ಹಾಕಿದರು.

ಯಾವುದೇ ಆಧಾರಗಳಿಲ್ಲದೆ ಸಿದ್ದರಾಮಯ್ಯನವರು ರಾಜ್ಯ ಸರಕಾರದ ವಿರುದ್ಧ ಅನಾವಶ್ಯಕ ಆರೋಪ ಮಾಡುತ್ತಿದ್ದಾರೆ. ಇಟ್ಟು ದಿನ ಅವರ ಟೀಕೆಗಳನ್ನು ಕೇಳಿಸಿಕೊಂಡು ಮೌನವಾಗಿದ್ದೆ. ಅವರೇ ಬಂದು ವೈದ್ಯಕೀಯ ಉಪಕರಣಗಳ ಖರೀದಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು, ಅಂಕಿ-ಅಂಶಗಳನ್ನು ಪರಿಶೀಲಿಸಲಿ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಆಹ್ವಾನಿಸಿದರು.

ಒಂದು ವೇಳೆ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಯಾವುದೇ ಲೋಪದೋಷಗಳು ಆಗಿರುವುದು ಕಂಡು ಬಂದರೆ, ಅಧಿಕಾರಿಗಳಾಗಲಿ ಅಥವಾ ಬೇರೆಯಾರೇ ಆಗಲಿ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದರೆ, ವಿಪಕ್ಷ ನಾಯಕ ಸಿದ್ದರಾಮಯ್ಯವರು ಸುಖಾ ಸುಮ್ಮನೆ ಆರೋಪ ಮಾಡುವುದನ್ನು ಬಿಟ್ಟು ಕಡತಗಳನ್ನು ಪರಿಶೀಲಿಸಲಿ ಎಂದು ಯಡಿಯೂರಪ್ಪ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News