ರಾಜ್ಯದಲ್ಲಿ ಮುಂದಿನ ಐದು ದಿನ ಭಾರೀ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಲ್ಲಿ 'ಯೆಲ್ಲೋ ಅಲರ್ಟ್'

Update: 2020-07-06 17:48 GMT

ಬೆಂಗಳೂರು, ಜು, 6: ಕರ್ನಾಟಕದಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು, ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದ್ದು, ಸೋಮವಾರದಿಂದಲೇ ಅಧಿಕ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.

ಸೋಮವಾರದಿಂದ ಐದು ದಿನಗಳ ಕಾಲ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ಬೆಳಗಾವಿಯಲ್ಲಿ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಅರಬ್ಬಿ ಸಮುದ್ರದಿಂದ ಕರ್ನಾಟಕದ ಕರಾವಳಿಯೆಡೆಗೆ ಗಂಟೆಗೆ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸತೊಡಗಿದೆ. ಇದರಿಂದ ಕರಾವಳಿ ಭಾಗದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮಂಗಳೂರಿನಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ, ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಉಡುಪಿಯಲ್ಲೂ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ.

ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರಿನಲ್ಲೂ ಮಳೆ ಹೆಚ್ಚಾಗಿದೆ. ಶಿವಮೊಗ್ಗದ ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ರವಿವಾರ ಭಾರೀ ಮಳೆಯಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸದಲ್ಲಿಯೂ ಮಳೆ ಹೆಚ್ಚಾಗಿದೆ. ಚಾರ್ಮಾಡಿ ಘಾಟ್‍ನ ತೊರೆಗಳು, ಕಾಫಿನಾಡಿನ ಜಲಪಾತಗಳು ಮರುಜೀವ ಪಡೆದುಕೊಂಡಿವೆ.

ಮಳೆಯಿಂದಾಗಿ ಈ ಭಾಗದ ಪ್ರಮುಖ ನದಿಗಳಾದ ತುಂಗಾ, ಭದ್ರಾ, ಹೇಮಾವತಿ, ವರಾಹಿ ತುಂಬಿ ಹರಿಯುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟ, ಹೊನ್ನಾವರ, ಅಂಕೋಲದಲ್ಲಿ ಧಾರಾಕಾರ ಮಳೆಯಾಗಿದೆ. ಕೊಡಗಿನಲ್ಲಿಯೂ ಮಳೆಗಾಲ ಬಿರುಸು ಪಡೆದುಕೊಂಡಿದೆ. ಉತ್ತರ ಕರ್ನಾಟಕದಲ್ಲಿಯೂ ಬೆಳಗಾವಿ, ದಾವಣಗೆರೆ, ಧಾರವಾಡ, ಬಳ್ಳಾರಿ ಮುಂತಾದ ಕಡೆಗಳಲ್ಲಿ ಮಳೆಯಾಗಿದೆ.

ಇಂದು ಬೆಳಗ್ಗೆಯಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದೆ. ಇನ್ನು ಕೆಲವೆಡೆ ಮುಂಜಾನೆಯಿಂದಲೇ ಜಿಟಿಜಿಟಿ ಮಳೆ ಶುರುವಾಗಿದೆ. ಇಂದು ಬೆಂಗಳೂರಿನಲ್ಲಿ ಕೂಡ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News