ಪತ್ರಕರ್ತ ಬಸವರಾಜು ಮೇಗಲಕೇರಿ ಅವರ 'ಅವರಿವರು' ವ್ಯಕ್ತಿ ಚಿತ್ರ ಪುಸ್ತಕ ಬಿಡುಗಡೆ

Update: 2020-07-06 17:54 GMT

ಮೈಸೂರು,ಜು.6: ಪತ್ರಕರ್ತ ಬಸವರಾಜು ಮೇಗಲಕೇರಿ ಅವರು “ಅವರಿವರು” ಪುಸ್ತಕದ ಮೂಲಕ ಮತ್ತೆ ಗಾಂಧಿಯನ್ನು ಹುಡುಕಿಕೊಂಡಿದ್ದಾರೆ ಎಂದು ಹಿರಿಯ ಸಾಹಿತಿ ನಟರಾಜ್ ಹುಳಿಯಾರ್ ಅಭಿಪ್ರಾಯಿಸಿದರು.

ಮೈಸೂರು ಗೆಳೆಯರು, ರೂಪ ಪ್ರಕಾಶನ ಮತ್ತು ಹಸಿರು ಆಗ್ರ್ಯಾನಿಕ್ಸ್ ವತಿಯಿಂದ ಪತ್ರಕರ್ತ ಬಸವರಾಜು ಮೇಗಲಕೇರಿ ಅವರ ನೂತನ “ಅವರಿವರು” ವ್ಯಕ್ತಿ ಚಿತ್ರಗಳ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವೀಡಿಯೋ ಮೂಲಕ ಮಾತನಾಡಿದ ಅವರು, ಬಸವರಾಜು ಮೇಗಲಕೇರಿ 25 ವರ್ಷಗಳಿಂದ  ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಾ ಒಂದು ಉತ್ತಮ ವ್ಯಕ್ತಿ ಚಿತ್ರದ ಮೂಲಕ ಪುಸ್ತಕವನ್ನು ಹೊರತಂದಿದ್ದಾರೆ. ಗಾಂಧಿಯನ್ನು ಲಂಕೇಶ್ ಮೂಲಕ ಕಂಡುಕೊಂಡ ಅವರು ಇಡೀ ಪುಸ್ತಕದ ತುಂಬಾ ಗಾಂಧಿವಾದವನ್ನೇ ಅನುಸರಿಸಿದ್ದಾರೆ ಎಂದು ಹೇಳಿದರು.

ಗಾಂಧಿ ಬಗ್ಗೆ ಸರಿಯಾಗಿ ಗ್ರಹಿಸದ ನಾವುಗಳು ಆಧುನಿಕ ಗಾಂಧಿಯನ್ನು ಕಂಡುಕೊಂಡಿದ್ದೇವೆ. ಬಸವರಾಜು ಅವರು ಶಾಂತಿ ಅಹಿಂಸಾ ಮಾರ್ಗದಲ್ಲಿ ಸಂಘಟಿತರಾದ ಅನೇಕ ಮಹಾನೀಯರನ್ನು ಪುಸ್ತಕದಲ್ಲಿ ತಂದಿದ್ದಾರೆ. ಅನುಸೂಯಮ್ಮ, ಕೌಲಗಿ, ದೊರೆಸ್ವಾಮಿ ಹೋರಾಟಗಾರ್ತಿ ಅಕ್ಕಯ್ಯ, ಎ.ಟಿ.ರಾಮಸ್ವಾಮಿ ಮತ್ತು ಪ್ರಸನ್ನ ಅಂತವರನ್ನು ನೆನಪು ಮಾಡಿಕೊಳ್ಳುವ ಮೂಲಕ ಅವರೊಳಗಿನ ಗಾಂಧಿಯನ್ನು ಹೊರಹಾಕಿದ್ದಾರೆ ಎಂದು ಹೇಳಿದರು.

ತಮ್ಮ ಸುಧೀರ್ಘ ಅನುಭವದಲ್ಲಿ ಅನೇಕ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಹಲವಾರು ಅಂಕಣಗಳನ್ನು ಬರೆದಿದ್ದಾರೆ. ಆದರೂ ಅವರು ಯಾವುದೇ ವಿಚಾರವನ್ನು ಗೊತ್ತಿದೆ ಎಂದು ಹೇಳುವುದಿಲ್ಲ, ಅದನ್ನು ಮತ್ತಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅವರ ಕರ್ತವ್ಯ ನಿರ್ವಹಣೆ ಹೇಗೆ ಎಂದರೆ ಕಂಪ್ಯೂಟರ್ ಮುಂದೆ ಬುದ್ಧ ಕುಳಿತ ರೀತಿಯಲ್ಲಿ ಇರುತ್ತದೆ. ಆ ಸಂದರ್ಭದಲ್ಲಿ ಅವರ ಬಳಿ ಯಾರೇ ಬಂದರೂ ಅದರ ಅರಿವೂ ಅವರಿಗೆ ಇರುವುದಿಲ್ಲ ಅಷ್ಟೊಂದು ನಿಷ್ಠತೆ ಪ್ರಮಾಣಿಕತೆ ಅವರ ಕರ್ತವ್ಯದಲ್ಲಿದೆ ಎಂದು ಬಣ್ಣಿಸಿದರು.

ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಪುಸ್ತಕ ಬಿಡುಗಡೆ ಮಾಡಿದರು. ರೂಪ ಪ್ರಕಾಶನದ ಮಹೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪುಸ್ತಕ ಕುರಿತು ಕೆ.ಪಿ.ಸುರೇಶ್ ಮಾತನಾಡಿದರು. ಪತ್ರಕರ್ತ ಬಸವರಾಜು ಮೇಗಲಕೇರಿ, ಬಿ.ಚಂದ್ರೇಗೌಡ ಉಪಸ್ಥಿತರಿದ್ದರು.

ಮೈಸೂರು ಗೆಳೆಯರು ಬಳಗದ ಎಚ್.ಎಸ್.ರೇಣುಕಾರಾಧ್ಯ, ಚಂದ್ರಶೇಖರ್ ಐಜೂರು, ಸ್ವಾಮಿ ಆನಂದ್, ರವಿಚಂದ್ರ, ಚಿಕ್ಕಮಗಳೂರು ಗಣೇಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News