ನಿಗದಿತ ಕಾಲಾವಧಿಯ ಉದ್ಯೋಗ ಪದ್ಧತಿ ಜಾರಿ: ಸರಕಾರದ ಆದೇಶವನ್ನು ಖಂಡಿಸಿದ ಎಐಟಿಯುಸಿ

Update: 2020-07-06 18:15 GMT

ಬೆಂಗಳೂರು, ಜು.6: ರಾಜ್ಯ ಸರಕಾರವು ಅಧಿಸೂಚನೆಯನ್ನು ಹೊರಡಿಸಿ ಮಾದರಿ ಸ್ಥಾಯಿ ಆದೇಶಗಳಿಗೆ ತಿದ್ದುಪಡಿ ತಂದಿದ್ದು, ಈ ತಿದ್ದುಪಡಿಯಿಂದ ಉದ್ಯೋಗ ಭದ್ರತೆ ಹಾಗೂ ಕಾಯಂ ನೌಕರಿಗೆ ಮಾರಣಾಂತಿಕವಾಗಿ ಪರಿಣಮಿಸಲಿದೆ. ಹೀಗಾಗಿ, ಈ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ಎಐಟಿಯುಸಿ ಒತ್ತಾಯಿಸಿದೆ.

ರಾಜ್ಯ ಸರಕಾರವು ಮಾಲಕರ ಒತ್ತಡಕ್ಕೆ ಮಣಿದು ಹಿಂಬಾಗಿಲಿನಿಂದ ಬಳಸಿ ಬಿಸಾಡುವ ನೀತಿಯನ್ನು ಜಾರಿಗೊಳಿಸಿದೆ. ಇಂಥ ದೂರಗಾಮಿ ಪರಿಣಾಮವಿರುವ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ರಾಜ್ಯದ ವಿಧಾನಸಭೆಯಲ್ಲಾಗಲಿ, ರಾಜಕೀಯ ಪಕ್ಷಗಳ ಜೊತೆಯಾಗಲಿ ಅಥವಾ ಕಾರ್ಮಿಕ ಸಂಘಟನೆಗಳ ಜೊತೆಯಲ್ಲಾಗಲಿ ಚರ್ಚಿಸದೆ ಜಾರಿಮಾಡಿರುವುದನ್ನು ಎಐಟಿಯುಸಿ ತೀವ್ರವಾಗಿ ಖಂಡಿಸಿದೆ.

ರಾಜ್ಯ ಸರಕಾರದ ಈ ಪ್ರತಿಗಾಮಿ ಕ್ರಮದ ಪರಿಣಾಮವಾಗಿ ಕೈಗಾರಿಕೆಗಳಲ್ಲಿ ನಿಗದಿತ ಕಾಲಾವಧಿಯ ಉದ್ಯೋಗಗಳು ಜಾರಿಯಲ್ಲಿದ್ದು, 30-35 ವರ್ಷ ಸೇವೆ ಸಲ್ಲಿಸುವ ಕಾರ್ಮಿಕನೊಬ್ಬ ಇದರ ಪರಿಣಾಮವಾಗಿ ತನ್ನ ಸೇವಾವಧಿಯಲ್ಲೇ 10-20 ಬಾರಿ ಉದ್ಯೋಗ ಬದಲಾಯಿಸಬೇಕಾಗುತ್ತದೆ.

ಇಂಥ ನೀತಿ ಜಾರಿಯಿಂದಾಗಿ ನಿರುದ್ಯೋಗ ಹೆಚ್ಚಲಿದೆ. ಕೆಲಸಗಾರರು ನಿಗದಿತ ಕಾಲಾವಧಿ ಒಪ್ಪಂದದ ತೂಗುಗತ್ತಿಯ ಕೆಳಗೆ ನಿರಂತರ ಭೀತಿಯಿಂದ ಕೆಲಸ ನಿರ್ವಹಿಸಬೇಕಿದ್ದು, ಹೆಚ್ಚಿನ ಕೂಲಿ ಮತ್ತು ಉತ್ತಮ ಸೇವಾ ಷರತ್ತುಗಳನ್ನು ಒತ್ತಾಯಿಸುವ ಅವರ ಸಾಮೂಹಿಕ ಚೌಕಾಸಿ ಹಕ್ಕುಗಳು ಕುಂಠಿತಗೊಳ್ಳಲಿದೆ. ಸರಕಾರದ ಈ ಕ್ರಮದಿಂದ ನಿರುದ್ಯೋಗ ಹೆಚ್ಚುವುದರ ಜೊತೆಗೆ ದುಡಿಯುವ ಕಾರ್ಮಿಕರ ಮತ್ತು ನೌಕರರ ಕೊಳ್ಳುವ ಶಕ್ತಿಯು ಕಡಿಮೆಯಾಗಲಿದೆ. ರಾಜ್ಯ ಸರಕಾರದ ಈ ಕ್ರಮವನ್ನು ಎಐಟಿಯುಸಿ ತೀವ್ರವಾಗಿ ಖಂಡಿಸಿ, ಒಂದು ವೇಳೆ ರಾಜ್ಯ ಸರಕಾರ ತನ್ನ ಕಾರ್ಮಿಕ-ವಿರೋಧಿ ಧೋರಣೆಯನ್ನು ಮುಂದುವರಿಸಿದರೆ, ಮುಂಬರುವ ದಿನಗಳಲ್ಲಿ ಕಾರ್ಮಿಕ ವರ್ಗವನ್ನು ಸಂಘಟಿಸಿ ತೀವ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಹರಿಗೋವಿಂದ ಅವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News