ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಿಗರಿಗೆ ನಿರ್ಬಂಧ: ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

Update: 2020-07-06 18:21 GMT

ಚಿಕ್ಕಮಗಳೂರು, ಜು.6: ಜಿಲ್ಲೆಯಾದ್ಯಂತ ಕೋವಿಡ್-19 ಸೋಂಕು ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ವಿಪತ್ತು ನಿರ್ವಹಣಾ ಕಾಯ್ದೆ 2005, ಕಲಂ 34(ಸಿ) ಮತ್ತು ದಂಡ ಪ್ರಕ್ರಿಯೆ ಸಂಹಿತೆ ಕಲಂ 144(3) ರಡಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಪ್ರವಾಸವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಡಾ.ಬಗಾದಿ ಗೌತಮ್ ಆದೇಶಿಸಿದ್ದಾರೆ.

ಪ್ರಸಕ್ತ ಹವಾಮಾನ ಮತ್ತು ಕೋವಿಡ್ ವಿಕೋಪದ ಈ ಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಪ್ರವಾಸಿಗರು ಪ್ರವಾಸ ಮಾಡುವುದು ಪ್ರವಾಸಿಗರ ಮತ್ತು ಜಿಲ್ಲೆಯ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಸೂಕ್ತವಲ್ಲವೆಂದು ಅಭಿಪ್ರಾಯಿಸಿ ಈ ಆದೇಶವನ್ನು ಹೊರಡಿಸಲಾಗಿದ್ದು, ಹೊರ ದೇಶ, ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ಬರುವ ಎಲ್ಲಾ ರೀತಿಯ ಪ್ರವಾಸಿಗರು ಜಿಲ್ಲೆಗೆ ಆಗಮಿಸಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದನ್ನು ಹಾಗೂ ಪ್ರವಾಸ ಮಾಡುವುದನ್ನು ಈ ತಕ್ಷಣದಿಂದ ನಿರ್ಬಂಧಿಸಲಾಗಿದೆ. ಹೊರ ದೇಶ, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಪ್ರವಾಸಿಗರಿಗಾಗಿ ಜಿಲ್ಲೆಯ ಯಾವುದೇ ಹೋಟೆಲ್‍ಗಳು, ರೆಸಾರ್ಟ್ ಗಳು, ಹೋಂ ಸ್ಟೇಗಳು ಹಾಗೂ ಇತರ ವಸತಿ ಗೃಹಗಳಲ್ಲಿ ವಸತಿ ಉದ್ದೇಶಕ್ಕೆ ರೂಮ್‍ಗಳನ್ನು ನೀಡುವುದನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಿ ಡಿಸಿ ಆದೇಶಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು ನಿಯಂತ್ರಣ ಸಂಬಂಧದ ಎಲ್ಲಾ ಮುಂಜಾಗ್ರತಾ ಕ್ರಮಗಳ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಆದ್ಯತೆ ನೀಡಿ ಅದರಂತೆ ಕಡ್ಡಾಯವಾಗಿ ಆದೇಶ ಪಾಲಿಸುವ ನಿಬಂಧನೆಗಳಿಗೆ ಒಳಪಟ್ಟು ಜಿಲ್ಲೆಯ ಒಳಗೆ ಪ್ರಯಾಣಿಸುವ ಯಾವುದೇ ನಿರ್ಬಂಧವಿರುವುದಿಲ್ಲ. ಆದರೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳ ಪ್ರದೇಶ ದ್ವಾರಗಳು/ಕೇಂದ್ರಗಳಲ್ಲಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರನ್ನು ಪ್ರವಾಸಿ ತಾಣಗಳ ಒಳಗೆ ಪ್ರವೇಶ ಮಾಡದಂತೆ ನಿರ್ಬಂಧಗೊಳಿಸಲು ಸ್ಥಳೀಯ ಅಧಿಕಾರಿಗಳಿಗೆ ಡಿಸಿ ಸೂಚಿಸಿದ್ದು, ಈ ಆದೇಶದ ಉಲ್ಲಂಘನೆಯು ಭಾರತ ದಂಡಸಂಹಿತೆ 1860ರ ಕಲಂ 188 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ ಕಲಂ 51ರಡಿ ಶಿಕ್ಷಾರ್ಹ ಅಪರಾಧವಾಗಿದೆ. ಈ ಆದೇಶ ತಕ್ಷಣದಿಂದ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News