ಚೀನಾದ ಮುಂದಿನ ಗುರಿ ತೈವಾನ್?: ದ್ವೀಪ ದೇಶದಲ್ಲಿ ಆವರಿಸಿದ ಭೀತಿ

Update: 2020-07-07 15:42 GMT

ತೈಪೇ (ತೈವಾನ್), ಜು. 7; ಹಾಂಕಾಂಗ್ ಮೇಲೆ ಚೀನಾವು ಕಠೋರ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಿರುವುದು ತೈವಾನ್ ನಲ್ಲೂ ಭಾರೀ ಆತಂಕಕ್ಕೆ ಕಾರಣವಾಗಿದೆ. ಪ್ರಜಾಪ್ರಭುತ್ವ ಹೊಂದಿರುವ ಸ್ವಯಮಾಡಳಿತದ ದ್ವೀಪವನ್ನು ಕಬಳಿಸುವುದು ಚೀನಾದ ಮುಂದಿನ ಗುರಿಯಾಗಿರಬಹುದು ಎಂಬ ಭೀತಿ ತೈವಾನ್ ನಲ್ಲಿ ವ್ಯಾಪಕವಾಗಿ ಹರಡುತ್ತಿದೆ.

1949ರಲ್ಲಿ ನಡೆದ ಆಂತರಿಕ ಯುದ್ಧದಲ್ಲಿ ರಾಷ್ಟ್ರೀಯವಾದಿ ಪಡೆಗಳು ಮಾವೊ ಝೆಡಾಂಗ್ರ ಕಮ್ಯುನಿಸ್ಟರಿಗೆ ಸೋತ ಬಳಿಕ ಚೀನಾ ಮತ್ತು ತೈವಾನ್ ಗಳು ಬೇರ್ಪಟ್ಟವು. ರಾಷ್ಟ್ರೀಯವಾದಿ ಪಡೆಗಳು ತೈವಾನ್ ದ್ವೀಪಕ್ಕೆ ಪಲಾಯನಗೈದವು. ಒಂದು ದಿನ ಅಗತ್ಯ ಬಿದ್ದರೆ ಬಲಪ್ರಯೋಗಿಸಿಯಾದರೂ ತೈವಾನನ್ನು ವಶಪಡಿಸಿಕೊಳ್ಳುವುದಾಗಿ ಚೀನಾ ಅಂದು ಪ್ರತಿಜ್ಞೆ ಮಾಡಿತ್ತು.

‘‘ಹಾಂಕಾಂಗ್ ನಲ್ಲಿ ಚೀನಾ ಕಠೋರ ಕಾನೂನನ್ನು ಹೇರಿದ ಬಳಿಕ ನಾನು ಆ ದೇಶವನ್ನು ಇನ್ನೂ ಹೆಚ್ಚು ದ್ವೇಷಿಸುತ್ತಿದ್ದೇನೆ’’ ಎಂದು ತೈವಾನ್ ನ 18 ವರ್ಷದ ವಿದ್ಯಾರ್ಥಿನಿ ಸಿಲ್ವಿಯಾ ಚಾಂಗ್ ತೈಪೆಯಲ್ಲಿರುವ ನ್ಯಾಶನಲ್ ತೈವಾನ್ ವಿಶ್ವವಿದ್ಯಾನಿಲಯದಲ್ಲಿ ಎಎಫ್ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.

‘‘50 ವರ್ಷಗಳ ಕಾಲ ಹಾಂಕಾಂಗ್ ನಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಅವರು ಭರವಸೆ ನೀಡಿದ್ದರು. ಆದರೆ, ಈಗ ಅವರು ಹೆಚ್ಚೆಚ್ಚು ಆಕ್ರಮಣಶೀಲರಾಗುತ್ತಿದ್ದಾರೆ. ಇಂದು ಹಾಂಕಾಂಗ್ ಗೆ ಆಗಿರುವುದು ನಾಳೆ ತೈವಾನ್ ಗೂ ಆಗಬಹುದು ಎಂಬ ಚಿಂತೆ ನನಗಾಗಿದೆ’’ ಎಂದು ಅವರು ಹೇಳುತ್ತಾರೆ.

ತೈವಾನನ್ನು ಮಣಿಸಲು ಚೀನಾವು ಹಲವಾರು ವರ್ಷಗಳಿಂದ ಬೆದರಿಕೆ ಮತ್ತು ಓಲೈಕೆಗಳನ್ನು ಪ್ರಯೋಗಿಸುತ್ತಾ ಬಂದಿದೆ. ಹಾಂಕಾಂಗ್ ಮಾದರಿಯಲ್ಲಿ ತೈವಾನ್ ಕೂಡ ‘ಒಂದು ದೇಶ, ಎರಡು ಆಡಳಿತ ವ್ಯವಸ್ಥೆಗಳನ್ನು’ ಹೊಂದಬಹುದು ಎಂಬ ಭರವಸೆಯನ್ನೂ ನೀಡಿತ್ತು. ಒಂದು ದೇಶ, ಎರಡು ಆಡಳಿತ ವ್ಯವಸ್ಥೆಗಳೆಂದರೆ, ಮಾತೃಭೂಮಿ ಚೀನಾದ ಕಮ್ಯುನಿಸ್ಟ್ ಆಡಳಿತದಲ್ಲಿ ಪ್ರಜೆಗಳಿಗೆ ಯಾವುದೇ ಸ್ವಾತಂತ್ರ್ಯ ಇರದಿದ್ದರೂ, ತೈವಾನ್ ನಲ್ಲಿ ಜನರು ಸಾಕಷ್ಟು ಸ್ವಾತಂತ್ರ್ಯಗಳನ್ನು ಅನುಭವಿಸಬಹುದು.

ತುಂಬಾ ಸಮಯದ ಹಿಂದೆಯೇ, ತೈವಾನ್ ನ ಎರಡೂ ದೊಡ್ಡ ರಾಜಕೀಯ ಪಕ್ಷಗಳು ಚೀನಾದ ಈ ಕೊಡುಗೆಯನ್ನು ತಿರಸ್ಕರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News