ಶಿಷ್ಯ ವೇತನಕ್ಕೆ ಆಗ್ರಹ: 10ನೇ ದಿನಕ್ಕೆ ಕಾಲಿಟ್ಟ ದಾವಣಗೆರೆಯ ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ

Update: 2020-07-08 13:37 GMT

ದಾವಣಗೆರೆ.ಜು.8: ಶಿಷ್ಯ ವೇತನ ನೀಡುವಂತೆ ಆಗ್ರಹಿಸಿ ವೈದ್ಯ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ 10 ದಿನಕ್ಕೆ ಕಾಲಿರಿಸಿದ್ದು, ಬುಧವಾರ ಮಳೆಯಲ್ಲಿಯೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.  

ನಂತರ ಜಯದೇವ ವೃತ್ತದಿಂದ ಕಾಲ್ನಡಿಗೆಯೊಂದಿಗೆ ಮೆರವಣಿಗೆ ಮೂಲಕ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ತೆರಳಿ ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸಬೇಕೆಂದು ಮನವಿ ಮಾಡಿದರು. 

ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು, ಸರ್ಕಾರಿ ಕೋಟಾದಡಿ ಕಾಲೇಜಿಗೆ ಪ್ರವೇಶ ಪಡೆದಿರುವ ನಾವು ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಿಸ್ವಾರ್ಥವಾಗಿ ಹಗಲಿರುಳು ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಜಿಲ್ಲಾಸ್ಪತ್ರೆಯು ಶೇ.90ರಷ್ಟು ನಮ್ಮ ಸೇವೆಯನ್ನೇ ಅವಲಂಬಿಸಿದೆ. ಕೊರೋನ ಸೋಂಕಿತರ ಚಿಕಿತ್ಸೆಯಲ್ಲೂ ಮುಂಚೂಣಿಯಲ್ಲಿದ್ದುಕೊಂಡು ರೋಗ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ. ಆದರೂ ಕೊರೋನ ವಾರಿಯರ್ಸ್ ಆದ ನಮಗೆ ಕಳೆದ 16 ತಿಂಗಳಿನಿಂದ ಶಿಷ್ಯ ವೇತನವನ್ನೇ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಕಾಲೇಜು ಆರಂಭವಾದಂದಿನಿಂದಲೂ ಸರ್ಕಾರವೇ ಶಿಷ್ಯವೇತನ ನೀಡುತ್ತಿತ್ತು. ಇದೀಗ ಕಾಲೇಜಿನ ಆಡಳಿತ ಮಂಡಳಿ ನೀಡಬೇಕೆಂದು ಸರ್ಕಾರ ಹೇಳುತ್ತಿದೆ. ಆದರೆ, ಆಡಳಿತ ಮಂಡಳಿಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸರ್ಕಾರಕ್ಕೆ ತಿಳಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ಸರ್ಕಾರ, ಆಡಳಿತ ಮಂಡಳಿ ಹಗ್ಗ-ಜಗ್ಗಾಟದಲ್ಲಿ ನಾವುಗಳು ಸಂಕಷ್ಟ ಅನುಭವಿಸುವಂತಾಗಿದೆ. ಈ ವಿಷಯವಾಗಿ ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದರು.  

ಸರಕಾರವೇ ಶಿಷ್ಯ ವೇತನ ಬರಿಸಲಿ  
ವಿದ್ಯಾರ್ಥಿಗಳಿಗೆ ಮೊದಲಿನಿಂದ ಸರಕಾರವೇ ಶಿಷ್ಯ ವೇತನ ಬರಿಸುತ್ತಾ ಬಂದಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪ್ರತಿಭಟನೆ ಮುಂದುವರಿಸಿ ಪರಿಹಾರ ಸಿಗುವ ತನಕ ಹೋರಾಡಿ ಎಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಎಂದು ಹೇಳಿದರು.  

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಲ್ಲಿಯೂ ಇದನ್ನೇ ಹೇಳಿದ್ದೇನೆ. ಸರ್ಕಾರವೇ ಮೊದಲಿನಿಂದ ಶಿಷ್ಯ ವೇತನ ಬರಿಸುತ್ತಿದೆ. ಅದನ್ನು ಮುಂದುವರಿಸಬೇಕು. ಅದನ್ನು ಬಿಟ್ಟು ಆಡಳಿತ ಮಂಡಳಿ ನೀಡುತ್ತದೆ ಎಂದು ಹೇಳುವುದು ಸರಿಯಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News