ಆನ್‍ಲೈನ್ ತರಗತಿ ರದ್ದು ಮಾಡಿದ್ದ ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

Update: 2020-07-08 13:49 GMT

ಬೆಂಗಳೂರು, ಜು.8: ಆನ್‍ಲೈನ್ ತರಗತಿಗಳನ್ನು ರದ್ದು ಮಾಡಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

ಆನ್‍ಲೈನ್ ತರಗತಿಗಳನ್ನು ನಿಷೇಧಿಸಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಸುದೀರ್ಘ ವಿಚಾರಣೆ ನಡೆಸಿತು.

ಬುಧವಾರ ಮಧ್ಯಂತರ ಆದೇಶ ನೀಡಿರುವ ಪೀಠ, ಆನ್‍ಲೈನ್ ತರಗತಿಗಳನ್ನು ನಿಷೇಧಿಸಿರುವ ರಾಜ್ಯ ಸರಕಾರದ ಕ್ರಮ ಮೇಲ್ನೋಟಕ್ಕೆ ಸರಿ ಎನ್ನಿಸದು. ಸಂವಿಧಾನದ ವಿಧಿ 21 ಮತ್ತು 21(ಎ) ಅಡಿ ನಾಗರಿಕರಿಗೆ ಲಭ್ಯವಿರುವ ಜೀವಿಸುವ ಮತ್ತು ಶಿಕ್ಷಣ ಪಡೆದುಕೊಳ್ಳುವ ಹಕ್ಕುಗಳನ್ನು ಸರಕಾರದ ಆದೇಶ ನಿರ್ಬಂಧಿಸಿದೆ ಎಂದು ಅಭಿಪ್ರಾಯಪಟ್ಟಿದೆ.

ಸಂವಿಧಾನದ ವಿಧಿ 162ರ ಅಡಿಯಲ್ಲಿ ಲಭ್ಯವಿರುವ ಅಧಿಕಾರ ಬಳಸಿ ಸರಕಾರ ಆದೇಶ ಹೊರಡಿಸಿದೆ ಎಂಬ ಅಡ್ವಕೇಟ್ ಜನರಲ್ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದೆ. ಅಲ್ಲದೆ, ಜೂ.15 ಮತ್ತು 27ರಂದು ಸರಕಾರ 1 ರಿಂದ 10ನೆ ತರಗತಿಯ ಶಾಲಾ ಮಕ್ಕಳಿಗೆ ಆನ್‍ಲೈನ್ ಶಿಕ್ಷಣವನ್ನು ರದ್ದುಗೊಳಿಸಿ ಹೊರಡಿಸಿದ್ದ ಆದೇಶಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದೇ ವೇಳೆ ನ್ಯಾಯಾಲಯದ ಆದೇಶವನ್ನು ಶಾಲಾ ಆಡಳಿತ ಮಂಡಳಿಗಳು ಕಡ್ಡಾಯವಾಗಿ ಆನ್‍ಲೈನ್ ತರಗತಿಗಳನ್ನು ನಡೆಸಬೇಕು ಎಂಬರ್ಥದಲ್ಲಿ ಭಾವಿಸಬಾರದು ಎಂದು ಪೀಠ ಸ್ಪಷ್ಟಪಡಿಸಿದೆ.

ಜೂ.15ರಂದು ತಜ್ಞರ ಸಮಿತಿಯಿಂದ ವರದಿ ಬರುವವರೆಗೂ ಆನ್‍ಲೈನ್ ತರಗತಿಗಳನ್ನು ನಡೆಸಬಾರದು ಎಂದು ಆದೇಶಿಸಿದ್ದ ಸರಕಾರ ಜೂ.27ರಂದು ಎಲ್‍ಕೆಜಿ ಯಿಂದ 5ನೆ ತರಗತಿ ಮಕ್ಕಳಿಗೆ ಆನ್‍ಲೈನ್ ತರಗತಿಗಳನ್ನು ಸೀಮಿತ ಅವಧಿಯಲ್ಲಿ ನಡೆಸಬಹುದೆಂದು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದೀಗ ಹೈಕೋರ್ಟ್ ಮಧ್ಯಂತರ ಆದೇಶದಿಂದಾಗಿ ಸರಕಾರದ ಈ ಆದೇಶಗಳು ತಾತ್ಕಾಲಿಕವಾಗಿ ಅಮಾನತುಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News