ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರ: ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ನಿರಾಣಿ 'ಪೆನ್‍ಡ್ರೈವ್'

Update: 2020-07-08 15:46 GMT
ಯಡಿಯೂರಪ್ಪ- ಮುರುಗೇಶ್ ನಿರಾಣಿ

ಬೆಂಗಳೂರು, ಜು. 8: ವೈದ್ಯಕೀಯ ಉಪಕರಣಗಳ ಅವ್ಯವಹಾರ ಸಂಬಂಧ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಮುರುಗೇಶ್ ಆರ್.ನಿರಾಣಿ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿರುವ ಅವ್ಯವಹಾರಕ್ಕೆ ಸಂಬಂಧಪಟ್ಟ 'ಪೆನ್ ಡ್ರೈವ್' ಇದೀಗ ಮುಖ್ಯಮಂತ್ರಿ ಯಡಿಯೂರಪ್ಪನವರು ಸೇರಿದಂತೆ ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇತ್ತೀಚೆಗೆ ನಡೆದ ಪಿಎಸಿ ಸಭೆಯಲ್ಲಿ ನಿರಾಣಿ ಪ್ರಸ್ತಾಪಿಸಿರುವ ವಿಚಾರವು ಸಮಿತಿ ನಡಾವಳಿಯಲ್ಲಿ ದಾಖಲಾಗಿದ್ದು, ಅದು ಸೋರಿಕೆಯಾಗಿದೆ. ಅದನ್ನು ಇಟ್ಟುಕೊಂಡು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವೈದ್ಯಕೀಯ ಉಪಕರಣ ಅವ್ಯವಹಾರ ಸಂಬಂಧಿಸಿದಂತೆ ಸಿದ್ದರಾಮಯ್ಯ, ಪಿಎಸಿ ಅಧ್ಯಕ್ಷರೂ ಆಗಿರುವ ಹಾಲಿ ಶಾಸಕ ಎಚ್.ಕೆ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ವಿಪಕ್ಷಗಳ ಹಲವು ಮುಖಂಡರು ಆರೋಪಿಸಿದ್ದರು. ಆದರೆ, ರಾಜ್ಯ ಸರಕಾರ ಆರೋಪ ನಿರಾಕರಣೆ ಮಾಡಿತ್ತು.

ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರೇ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸವಾಲು ಹಾಕಿ, ದಾಖಲೆಗಳನ್ನು ಪರಿಶೀಲನೆ ನಡೆಸಲಿ ಎಂದು ಸವಾಲು ಹಾಕಿದ್ದರು. ಡಿಸಿಎಂ ಗೋವಿಂದ ಕಾರಜೋಳ, ಸಿದ್ದರಾಮಯ್ಯನವರ ಬಳಿ ದಾಖಲೆಗಳಿದ್ದರೆ ನೀಡಲಿ, ಸರಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ತಿರುಗೇಟು ನೀಡಿದ್ದರು. ಆದರೆ, ಇದೀಗ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರೇ ವಿಧಾನಸಭೆಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿರುವ 'ಪೆನ್ ಡ್ರೈವ್' ಸರಕಾರವನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.

'ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರದ ದಾಖಲೆ ಕೇಳ್ತಿದ್ದಿರಲ್ಲಾ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಶ್ರೀರಾಮುಲು, ಡಾ.ಕೆ.ಸುಧಾಕರ್ ನಿಮ್ಮ ಪಕ್ಷದ ಮಾಜಿ ಸಚಿವ ಮುರುಗೇಶ್ ನಿರಾಣಿ ಬಳಿ ಇರುವ ಪೆನ್ ಡ್ರೈವ್‍ನಲ್ಲಿ ಇದೆಯಂತೆ, ಕಲೆಕ್ಟ್ ಮಾಡಿಕೊಳ್ಳಿ. ಅವರೇ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಹೇಳಿದ್ದಾರೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ನನ್ನ ಬಳಿ ಯಾವುದೇ ಪೆನ್ ಡ್ರೈವ್ ಇಲ್ಲ

ಮಾಧ್ಯಮಗಳಲ್ಲಿ ನಿರಾಣಿ ಪೆನ್‍ಡ್ರೈವ್ ಪ್ರಸ್ತಾಪವಾದ ಕೂಡಲೇ ಪ್ರತಿಕ್ರಿಯಿಸಿರುವ ಶಾಸಕ ಮುರುಗೇಶ್ ನಿರಾಣಿ, 'ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ನನ್ನ ಬಳಿ ಯಾವುದೇ ಪೆನ್ ಡ್ರೈವ್ ಇಲ್ಲ. ಈ ಸಂಬಂಧ ಪಿಎಸಿ ಸಭೆಯಲ್ಲಿ ನಾನು ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News