ಕಾರವಾರ: ಅನಾರೋಗ್ಯದಿಂದ ಮೃತಪಟ್ಟ ಯೋಧನ ತಾಯಿಯ ಶವ ಸಂಸ್ಕಾರಕ್ಕೆ ಸ್ಥಳೀಯರ ವಿರೋಧ

Update: 2020-07-08 16:45 GMT

ಕಾರವಾರ,ಜು.8: ದೂರದ ಜಾರ್ಖಂಡ್ ದಿಂದ ಕಾರವಾರದ ನೌಕಾನೆಲೆಗೆ ಬಂದು ಸೇವೆ ಸಲ್ಲಿಸುತ್ತಿರುವ ಯೋಧರೊಬ್ಬರ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಅಂತ್ಯ ಸಂಸ್ಕಾರಕ್ಕೆ ಪರದಾಡುವಂತಾಯಿತು. 

ಸುಮೀತ್ ಕುಮಾರ್ ಕಾರವಾರದ ನೌಕಾನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ. ಅವರ ತಾಯಿ ಅನಿತಾದೇವಿ ಕಿಡ್ನಿ ವೈಫಲ್ಯಕ್ಕೆ ಸಂಬಂಧಿಸಿದಂತೆ ನೌಕಾನೆಲೆಯ ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆ. ಆದರೆ ಲಾಕ್ ಡೌನ್ ಸಮಸ್ಯೆಯಿಂದ ಜಾರ್ಖಂಡ್ ಗೆ ತೆರಳಲಾಗದೆ, ಕಾರವಾರದಲ್ಲೇ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಾಗ ಚೆಂಡಿಯಾ ಹಾಗೂ ಅರ್ಗಾದ ಜನರು ವಿರೋಧ ಮಾಡಿದ್ದಾರೆ. ಯಾವುದೇ ಕಾರಣಕ್ಕೆ ಸ್ಥಳೀಯ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಮಹಿಳೆಯ ಮೃತದೇಹ ಜಾರ್ಖಂಡ್ ಗೆ ಒಯ್ಯಲು ಸಾಧ್ಯವಾಗಿಲ್ಲ. ಕಾರವಾರದಲ್ಲಿ ಅಂತ್ಯಸಂಸ್ಕಾರ ಮಾಡಲು ಯೋಧ ಅಧಿಕಾರಿಗಳಲ್ಲಿ ಕೇಳಿಕೊಂಡ ಬಳಿಕ ಚೆಂಡಿಯಾ ಗ್ರಾಮ ಪಂಚಾಯತ್ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕಾಗಿ ಅನುಮತಿ ಪಡೆದುಕೊಂಡಿದ್ದರು. ಆದರೆ ಕೊರೋನ ಆತಂಕವಿರುವ ಕಾರಣ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.

ಮೃತ ತಾಯಿಗೆ ಕೊರೋನ ಟೆಸ್ಟ್ ಸಹ ಮಾಡಲಾಗಿದೆ ಎಂದು ಯೋಧ ತಿಳಿಸಿದ್ದರು. ಆದರೆ ಅಂತ್ಯ ಸಂಸ್ಕಾರಕ್ಕೆ ಜನ ಒಪ್ಪಿಲ್ಲ. ಅಧಿಕಾರಿಗಳು, ಪೊಲೀಸರು ಸ್ಥಳೀಯರ ಮನವೊಲಿಸಲು ಪ್ರಯತ್ನಿದ್ದು, ಆದರೂ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ.

ಅಧಿಕಾರಿಗಳು ಜನರ ಮನವೊಲಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗದೆ ಇದ್ದರಿಂದ ಯೋಧ ಸುಮೀತ್ ಕುಮಾರ್ ಇಕ್ಕಟ್ಟಿಗೆ ಸಿಲುಕಿದ್ದರು. ಕೊನೆಗೆ ವಿಷಯ ತಿಳಿದ ವಿವಿಧ ಸಂಘಟನೆಯ ಸಹಾಯದಿಂದ ಕಾರವಾರ ನಗರದ ಸರ್ವೋದಯ ನಗರದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ವ್ಯವಸ್ಥೆ ಮಾಡಿದ್ದಾರೆ. ಸ್ಥಳೀಯರ ಮನವೊಲಿಸಿದ ಸಂಘಟನೆ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಶವ ಸಂಸ್ಕಾರಕ್ಕೆ ಮುಂದಾದರು. ಬಳಿಕ ನೌಕಾನೆಲೆ ಆಸ್ಪತ್ರೆಯಿಂದ ಮೃತದೇಹವನ್ನು ಕಾರವಾರದ ಸರ್ವೋದಯ ಸ್ಮಶಾನಕ್ಕೆ ತಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ.

ಜನ ಶಕ್ತಿ ವೇದಿಕೆಯ ಮಾಧವ ನಾಯಕ, ರಾಮಾ ನಾಯ್ಕ, ಬಾಬು ಶೇಖ್ ಹಾಗೂ ಇನ್ನಿತರರು ಸಹಾಯದಿಂದ ಅಂತ್ಯ ಸಂಸ್ಕಾರ ನೆರವೇರಿತು.

ಮಾನವಿಯತೆ ಮರೆತ ಜನ
ದೇಶ ಸೇವೆಗೆಂದು ಕಾರವಾರದ ನೌಕಾನೆಲೆಗೆ ಬಂದ ಜಾರ್ಖಂಡ್ ನ ಯೋಧನ ತಾಯಿಯ ಅಂತ್ಯಸಂಸ್ಕಾರಕ್ಕೆ ಚೆಂಡಿಯಾ- ಅರ್ಗಾದ ಜನರು ತಡೆಯೊಡ್ಡಿದ್ದು ಅಮಾನವಿಯ ಕೃತ್ಯ ಎಂದು ವಿವಿಧ ಸಂಘಟನೆಯ ಜನರು ಆರೋಪಿಸಿದ್ದಾರೆ. ಕೊರೋನ ಸೋಂಕು ಇಲ್ಲ ಎಂದು ದೃಢಪಟ್ಟರೂ ಸಹ ಅಂತ್ಯ ಸಂಸ್ಕಾರಕ್ಕೆ ಅಡ್ಡಿ ಪಡಿಸಿದ್ದು ಸರಿಯಲ್ಲ ಎನ್ನುವ ಮಾತು ನಗರದ ಜನರಿಂದ ಕೇಳಿಬಂದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News