ಜೆಡಿಎಸ್ ಜೊತೆ ಮೈತ್ರಿ ಬೇಡ ಎಂದಿದ್ದೆ, ಯಾರೂ ಕೇಳಲಿಲ್ಲ: ಸಿದ್ದರಾಮಯ್ಯ

Update: 2020-07-09 04:08 GMT

ಮೈಸೂರು,ಜು.8: ಕೊರೋನ ನಿಯಂತ್ರಣ ವಿಚಾರದಲ್ಲಿ ಸರ್ಕಾರ ಖರ್ಚು ಮಾಡಿರುವ ಹಣದ ಲೆಕ್ಕವನ್ನು ಕೊಡಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದ ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೋನ ವಿಚಾರದಲ್ಲಿ ರಾಜ್ಯ ಸರ್ಕಾರ ಖರ್ಚು ಮಾಡಿರುವ ಹಣದ ಲೆಕ್ಕವನ್ನು ಕೊಡಬೇಕು, ನಾನು ಲೆಕ್ಕ ಕೊಡುವಂತೆ ಹಲವಾರು ಬಾರಿ ಪತ್ರ ಬರೆದಿದ್ದೇನೆ. ಅದ್ಯಾವುದಕ್ಕೂ ಕ್ಯಾರೆ ಎಂದಿಲ್ಲ, ಅಧಿಕಾರಿಗಳಿಂದ ನನ್ನ ಬಳಿಗೆ ದಾಖಲೆ ಕಳುಹಿಸಲಿ. ನಾನೇ ಲೆಕ್ಕ ಪರಿಶೀಲಿಸುತ್ತೇನೆ. ಸರ್ಕಾರ ಪಾರದರ್ಶಕವಾಗಿದ್ದರೆ ಲೆಕ್ಕ ಕೊಡಲಿ, ಇಲ್ಲದಿದ್ದರೆ ಈ ವಿಚಾರವನ್ನು ಇಲ್ಲಿಗೆ ಬಿಡುವುದಿಲ್ಲ ಎಂದು ಹರಿಹಾಯ್ದರು.

ಕೊರೋನ ಕಡಿಮೆ ಇದ್ದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಲಾಕ್‍ಡೌನ್ ಮಾಡಿದರು. ಲಾಕ್‍ಡೌನ್ ನಿಂದ ಯಾವ ಪ್ರಯೋಜನವೂ ಆಗಲಿಲ್ಲ. ಲಾಕ್‍ಡೌನ್ ಮುಗಿದ ಮೇಲೆ ಸೋಂಕು ಹೆಚ್ವಾಗುತ್ತಲಿದೆ. ರಾಜ್ಯ ಸರ್ಕಾರವೂ ಕೊರೋನ ನಿಯಂತ್ರಿಸುವಲ್ಲಿ ವಿಫಲಗೊಂಡಿತು ಎಂದು ಬೇಸರ ವ್ಯಕ್ತಪಡಿಸಿದರು.

ಲಾಕ್‍ಡೌನ್ ಈಗ ಅವಶ್ಯಕತೆ ಇತ್ತು. ಆದರೆ ಈಗ ಕಾಲ ಮಿಂಚಿಹೋಗಿದೆ. ಬೆಂಗಳೂರಿನಲ್ಲಿ ಕೊರೋನ ಸೋಂಕು ದೊಡ್ಡಮಟ್ಟದಲ್ಲಿ ಸ್ಫೋಟಗೊಂಡಿದೆ. ಜನರು ಭಯಗೊಂಡು ಬೆಂಗಳೂರು ಬಿಡುತ್ತಿದ್ದಾರೆ. ಸರ್ಕಾರ ಅವರಿಗೆ ವಿಶ್ವಾಸ ತುಂಬುವ ಕೆಲಸ ಮಾಡಬೇಕಿತ್ತು. ಅವರಿಗೆ ಊಟ, ಕೆಲಸ ಮತ್ತು ಹಣ ನೀಡಬೇಕಿತ್ತು, ಸರ್ಕಾರ ಈ ಕೆಲಸ ಮಾಡಲಿಲ್ಲ. ಹಾಗಾಗಿ ಜನ ಬೆಂಗಳೂರು ಬಿಡುತ್ತಿದ್ದಾರೆ ಎಂದು ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಬೇಡ ಎಂದು ನಾನು ಹೇಳಿದ್ದೆ. ಆದರೆ ಯಾರು ಕೇಳಲಿಲ್ಲ, ಅವತ್ತು ನನ್ನದು ಸಿಂಗಲ್ ವಾಯ್ಸ್ ಆಗಿಬಿಟ್ಟಿತು ಎಂದು ಸಿದ್ದರಾಮಯ್ಯ ಹೇಳಿದರು.

ಜೆಡಿಎಸ್ ಜೊತೆ ಮತ್ತೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಕಳೆದ ಲೋಕಸಭಾ ಚುನಾವಣೆಯಲ್ಲೇ ಜೆಡಿಎಸ್ ಜೊತೆ ಮೈತ್ರಿ ಬೇಡ ಎಂದು ಹೇಳಿದ್ದೆ. ಅವರ ಜೊತೆ ಮೈತ್ರಿ ಮಾಡಿಕೊಳ್ಳಲಿಲ್ಲ ಎಂದಿದ್ದರೆ 8 ಸೀಟು ಕಾಂಗ್ರೆಸ್ ಪಕ್ಷ ಗೆಲ್ಲುತಿತ್ತು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಾನು ವಿಶ್ರಾಂತಿ ತೆಗೆದುಕೊಳ್ಳುವ ಸಲುವಾಗಿ ಮೈಸೂರಿಗೆ ಬಂದಿದ್ದೆ. ಆದರೆ ಕೆಲವರು ಕ್ವಾರಂಟೈನ್‍ನಲ್ಲಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಈ ಕಾರಣದಿಂದ ಇವತ್ತೇ ಬೆಂಗಳೂರಿಗೆ ವಾಪಸ್ ಹೋಗುತ್ತಿದ್ದೇನೆ. ವಿಶ್ರಾಂತಿ ಅಂದರೆ ಪರವಾಗಿಲ್ಲ. ಕ್ವಾರಂಟೈನ್ ಅಂದರೆ ಬೇರೆ ಅರ್ಥ ಬರುತ್ತದೆ. ಅದಕ್ಕೆ ಬೆಂಗಳೂರಿಗೆ ವಾಪಸ್ ಹೋಗುತ್ತಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News