ಚಿಕ್ಕಮಗಳೂರು: ಜಿಲ್ಲೆಯಲ್ಲಿ ಒಂದೇ ದಿನ 23 ಮಂದಿಗೆ ಕೊರೋನ ಪಾಸಿಟಿವ್; ಓರ್ವ ಮಹಿಳೆ ಮೃತ್ಯು

Update: 2020-07-08 17:27 GMT

ಚಿಕ್ಕಮಗಳೂರು, ಜು.8: ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 23 ಜನರಿಗೆ ಕೊರೋನ ಸೋಂಕು ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದ್ದು, ಮಹಿಳೆಯೋರ್ವರು ಸೋಂಕಿಗೆ ತುತ್ತಾಗಿ ಬಲಿಯಾಗಿರುವ ಘಟನೆಯೂ ಬುಧವಾರ ನಗರದಲ್ಲಿ ವರದಿಯಾಗಿದೆ.

ಚಿಕ್ಕಮಗಳೂರು ತಾಲೂಕಿನಲ್ಲಿ 12 ಜನರಿಗೆ ಹಾಗೂ ಕಡೂರು ತಾಲೂಕಿನಲ್ಲಿ 8 ಜನರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದ್ದರೇ, ಕೊಪ್ಪ, ನರಸಿಂಹರಾಜಪುರ ಮತ್ತು ಅಜ್ಜಂಪುರ ತಾಲೂಕಿನಲ್ಲಿ ತಲಾ ಓರ್ವರದಲ್ಲಿ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ. ಚಿಕ್ಕಮಗಳೂರು ನಗರದಲ್ಲಿ ಕೋಟೆ, ಹೊಸಮನೆ, ಉಪ್ಪಳ್ಳಿ, ಕಲ್ಯಾಣ ನಗರದ ಬಡಾವಣೆಯಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದ್ದರೆ, ದೋಣಿಕಣ ಬಡಾವಣೆಯೊಂದರಲ್ಲೇ 7 ಪ್ರಕರಣಗಳು ವರದಿಯಾಗಿವೆ. ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಒಂದು ಪ್ರಕರಣ ಸೇರಿ ಚಿಕ್ಕಮಗಳೂರು ತಾಲೂಕಿನಲ್ಲಿ ಬುಧವಾರ ಒಂದೇ ದಿನ 12 ಪ್ರಕರಣಗಳು ಬೆಳಕಿಗೆ ಬಂದಿವೆ.

ಇನ್ನು ಕಡೂರು ತಾಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ 2, ಕಡೂರು ಪಟ್ಟಣದ ಕೆಎಂ ರಸ್ತೆಯಲ್ಲಿ 2, ತಿಮ್ಲಾಪುರ ಗ್ರಾಮದಲ್ಲಿ 3 ಪ್ರಕರಣ, ಕೆವಿ ಕಾಲನಿಯಲ್ಲಿ 1 ಪ್ರಕರಣ ಸೇರಿ ಒಂದೇ ದಿನ 8 ಪ್ರಕರಣ ವರದಿಯಾಗಿದೆ. ಇನ್ನು ನರಸಿಂಹರಾಜಪು ತಾಲೂಕಿನ ಮೆಣಸೂರಿನಲ್ಲಿ 1 ಪ್ರಕರಣ, ಕೊಪ್ಪ ತಾಲೂಕಿನ ಹುಲ್ಮಗಿ ಗ್ರಾಮದಲ್ಲಿ 1 ಪ್ರಕರಣ ಹಾಗೂ ಅಜ್ಜಂಪುರ ಪಟ್ಟಣ ಅಂಬೇಡ್ಕರ್ ಬಡಾವಣೆಯಲ್ಲಿ 1 ಪ್ರಕರಣ ವರದಿಯಾಗಿದೆ. ಸೋಂಕಿತರನ್ನು ಜಿಲ್ಲೆಯ ಕೋವಿಡ್-19 ಸೆಂಟರ್‍ನ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಸೋಂಕಿತರು ವಾಸವಿದ್ದ ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, ಈ ಪ್ರದೇಶಗಳಲ್ಲಿ ಕಂಟೈನ್‍ಮೆಂಟ್ ಝೋನ್‍ಗಳನ್ನು ಗುರುತಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಗಳ ಪತ್ತೆಗೆ ಜಿಲ್ಲಾಡಳಿತ ಅಧಿಕಾರಿಗಳ ತಂಡವನ್ನು ನೇಮಿಸಿದೆ. ಅಲ್ಲದೇ ಸೀಲ್‍ಡೌನ್ ಪ್ರದೇಶಗಳ ಮೇಲ್ವಿಚಾರಣೆಗೆ ಘಟನಾ ಕಮಾಂಡರ್ ಗಳನ್ನು ನೇಮಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.

ಬುಧವಾರ ಪತ್ತೆಯಾಗಿರುವ 23 ಪ್ರಕರಣಗಳೂ ಸೇರಿ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 123ಕ್ಕೇರಿದ್ದು, ಸದ್ಯ ಜಿಲ್ಲೆಯಲ್ಲಿ 54 ಸಕ್ರೀಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಎರಡು ಮಂದಿ ಮೃತಪಟ್ಟಿದ್ದು, ಉಳಿವ ಪ್ರಕರಣಗಳನ್ನು ಗುಣಮುಖರಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು, ಬುಧವಾರ ಜಿಲ್ಲೆ ಹಾಗೂ ನಗರದಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆಯಿಂದಾಗಿ ಕಾಫಿನಾಡಿನ ಜನತೆ ಭಯಭೀತರಾಗಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಹೊರ ಜಿಲ್ಲೆ, ರಾಜ್ಯ ಹಾಗೂ ಬೆಂಗಳೂರಿನಿಂದ ಹಿಂದಿರುಗಿದವರಲ್ಲಿ ಕಂಡು ಬಂದಿದ್ದು, ಕಾಫಿನಾಡಿಗೆ ಹೊರ ಜಿಲ್ಲೆಗಳಿಂದ ಇತ್ತೀಚೆಗೆ ಹಿಂದಿರುಗಿದವರೇ ಕಂಟಕವಾಗಿ ಪರಿಣಮಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಜೆಡಿಎಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯರೊಬ್ಬರಿಗೂ ಕೊರೋನ ಪಾಸಿಟಿವ್ ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಸೋಂಕಿನ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ತಮ್ಮ ಮನೆಯಲ್ಲಿ ಹೋಂ ಕ್ವಾರಂಟೈನ್‍ಗೆ ಒಳಪಟ್ಟಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪ್ರಾಥಮಿಕ ಸಂಪರ್ಕಗಳನ್ನು ಗುರುತಿಸಿ ಅವರನ್ನೂ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅವರಿಗೆ ಸೋಂಕು ತಗುಲಿರುವುದನ್ನು ಸ್ವತಃ ಅವರು ತಮ್ಮ ಫೇಸ್ ಖಾತೆಯಲ್ಲಿ ದೃಢಪಡಿಸಿದ್ದಾರೆ.

ವರದಿಗೂ ಮುನ್ನ ಉಸಿರಾಟದ ತೊಂದರೆಯಿಂದ ಮಹಿಳೆ ಸಾವು: 
ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 52 ವರ್ಷದ ಮಹಿಳೆಯೊಬ್ಬರು ಮಂಗಳವಾರ ಸಂಜೆ ಮೃತಪಟ್ಟಿದ್ದು, ಕೋವಿಡ್ ಶಂಕೆ ಮೇರೆಗೆ ಆಕೆಯ ಸ್ವಾಬ್ ಸಂಗ್ರಹಿಸಿ ಜಿಲ್ಲಾಡಳಿತ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿತ್ತು. ಬುಧವಾರ ಈ ವರದಿ ಜಿಲ್ಲಾಡಳಿತ ಕೈ ಸೇರಿದ್ದು, ಮಹಿಳೆಯಲ್ಲಿ ಪಾಸಿಟಿವ್ ಇರುವುದು ವರದಿಯಲ್ಲಿ ದೃಢಪಟ್ಟಿದೆ.

ಈ ಮಹಿಳೆ ಇತ್ತೀಚೆಗೆ ಬೆಂಗಳೂರಿಗೆ ಹೋಗಿ ಹಿಂದಿರುಗಿದ್ದು, ಮಂಗಳವಾರ ಸಂಜೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆತರಲು ಮುಂದಾಗಿದ್ದ ವೇಳೆ ಮೃತಪಟ್ಟಿದ್ದಾರೆ. ಪಾಸಿಟಿವ್ ಹಿನ್ನೆಲೆಯಲ್ಲಿ ಮಹಿಳೆಯ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಿದ್ದು, ಮನೆಯನ್ನೂ ಸೀಲ್‍ಡೌನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕಗಳ ಮಾಹಿತಿ ಸಂಗ್ರಹಿಸಿರುವ ಜಿಲ್ಲಾಡಳಿತ ಅವರ ಸ್ವಾಬ್ ಪರೀಕ್ಷೆಗೆ ರವಾನಿಸಿದೆ.                        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News