ರಾಜ್ಯದ ಮತ್ತೋರ್ವ ಶಾಸಕರಿಗೆ ಕೊರೋನ ಪಾಸಿಟಿವ್

Update: 2020-07-08 17:55 GMT

ಚಿಕ್ಕಮಗಳೂರು, ಜು.8: ರಾಜ್ಯದ ಮತ್ತೋರ್ವ ಶಾಸಕರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಈ ಪ್ರಕರಣದಿಂದಾಗಿ ಇಂದು ಒಂದೇ ದಿನ ಇಬ್ಬರು ಶಾಸಕರು ಸೋಂಕಿಗೆ ತುತ್ತಾದಂತಾಗಿದೆ.

ಶಾಸಕರೊಬ್ಬರಿಗೆ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರ ಗಂಟಲ ದ್ರವ ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಪ್ರಯೋಗಾಲಯ ವರದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.

ಶಾಸಕರಲ್ಲಿ ಸೋಂಕು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಇತ್ತೀಚೆಗೆ ಶಾಸಕರು ಬೆಂಗಳೂರಿಗೆ ಅನೇಕ ಬಾರಿ ಹೋಗಿ ಬಂದಿದ್ದರೆಂದು ತಿಳಿದು ಬಂದಿದ್ದು, ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭದಲ್ಲೂ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ಈಗಾಗಲೇ ಜಿಲ್ಲೆಯಲ್ಲಿ ಮೂಡಿಗೆರೆ ಹಾಗೂ ಚಿಕ್ಕಮಗಳೂರಿನ ಇಬ್ಬರು ಎಮ್ಮೆಲ್ಸಿಗಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಬಿಜೆಪಿ ಮುಖಂಡ, ಸಿಡಿಎ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಮತ್ತೋರ್ವ ಶಾಸಕರಲ್ಲೂ ಸೋಂಕು ದೃಢಪಟ್ಟಿರುವುದನ್ನು ಕೊರೋನ ಜಿಲ್ಲಾ ಸರ್ವೇಕ್ಷಣಾಧಿಕಾರಿ ಬುಧವಾರ ರಾತ್ರಿ ದೃಢಪಡಿಸಿದ್ದಾರೆ. ಶಾಸಕರ ಪ್ರಯೋಗಾಲಯದ ವರದಿ ಬುಧವಾರ ಸಂಜೆ ವೇಳೆ ಜಿಲ್ಲಾಡಳಿತಕ್ಕೆ ತಲುಪಿದೆ ಎಂದು ತಿಳಿದುಬಂದಿದೆ.

ಸಚಿವ ಸಿ.ಟಿ.ರವಿ ಅವರ ಆಪ್ತರು ಹಾಗೂ ಬಿಜೆಪಿ ಮುಖಂಡರಲ್ಲಿ ಕೊರೋನ ಸೋಂಕು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸಚಿವ ಸಿ.ಟಿ.ರವಿ ಕೊರೋನ ಪರೀಕ್ಷೆಗೆ ಒಳಪಟ್ಟಿದ್ದು, ಪ್ರಯೋಗಾಲಯದ ವರದಿಯಲ್ಲಿ ಕೊರೋನ ನೆಗೆಟಿವ್ ಬಂದಿದೆ. ಸಿ.ಟಿ.ರವಿ ಅವರ ಆಪ್ತ ಹಾಗೂ ವಿಧಾನ ಪರಿಷತ್ ಸದಸ್ಯರೊಬ್ಬರಲ್ಲಿ ಕೊರೋನ ಸೋಂಕಿರುವುದು ದೃಢಪಟ್ಟಿತ್ತು. ಇದರ ಬೆನ್ನಲ್ಲೆ ಸಿಡಿಎ ಅಧ್ಯಕ್ಷ ಮತ್ತು ನಗರಸಭೆ ಅಧ್ಯಕ್ಷ, ಬಿಜೆಪಿ ಮುಖಂಡ ಹಾಗೂ ಅವರ ಪತ್ನಿಗೆ ಸೋಂಕಿರುವುದು ದೃಢಪಟ್ಟಿತ್ತು. 

ಈ ಹಿನ್ನೆಲೆಯಲ್ಲಿ ಸಚಿವ ಸಿ.ಟಿ.ರವಿ ಅವರ ಗಂಟಲ ದ್ರವ ಮತ್ತು ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿದ್ದು ಪ್ರಯೋಗಾಲಯದ ವರದಿಯಲ್ಲಿ ಕೊರೋನ ನೆಗೆಟಿವ್ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News