ಕೊರೋನ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ವಿವಿಗಳ ಪರೀಕ್ಷೆ ಬೇಡ: ಎಐಡಿಎಸ್‍ಓ ಆಗ್ರಹ

Update: 2020-07-08 18:16 GMT

ಬೆಂಗಳೂರು, ಜು. 8: ಕೋವಿಡ್-19 ನಿಯಂತ್ರಣಕ್ಕೆ ಬರುವವರೆಗೂ ವಿವಿಗಳ ಪರೀಕ್ಷೆಗಳನ್ನು ನಡೆಸಬಾರದು. ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಸಮಸ್ಯೆಯನ್ನು ಶಿಕ್ಷಣ ತಜ್ಞರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಅವುಗಳನ್ನು ಪರಿಹರಿಸಿ, ವಿದ್ಯಾರ್ಥಿ ಪರವಾದ ಹೊಸ ಸುತ್ತೋಲೆ ಹೊರಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತಂಕವನ್ನುಂಟು ಮಾಡುವ ಮಾರ್ಗಸೂಚಿಗಳನ್ನು ರದ್ದುಪಡಿಸಬೇಕು ಎಂದು ಎಐಡಿಎಸ್‍ಓ ಆಗ್ರಹಿಸಿದೆ.

ವಿಶ್ವವಿದ್ಯಾನಿಲಯಗಳ ಪರೀಕ್ಷೆಗಳನ್ನು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಯುಜಿಸಿಗೆ ನೀಡಿರುವ ಮಾರ್ಗಸೂಚಿಗಳನ್ನು ಎಐಡಿಎಸ್‍ಒ ಖಂಡಿಸಿದ್ದು, ಕೋವಿಡ್-19 ಅತ್ಯಂತ ವೇಗವಾಗಿ ಹರಡುತ್ತಿದೆ ಮತ್ತು ಅದರಲ್ಲೂ ಕೆಲವು ರಾಜ್ಯಗಳಲ್ಲಿ ಸಾಮುದಾಯಿಕ ಹರಡುವಿಕೆಗೆ ಪ್ರಾರಂಭವಾಗಿದೆ. ಇಂತಹ ಸಂದರ್ಭದಲ್ಲಿ ಗೃಹ ಸಚಿವಾಲಯ ಯುಜಿಸಿಗೆ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ನಿರ್ದೇಶನ ನೀಡಿರುವುದು ಸಲ್ಲ ಎಂದು ಆಕ್ಷೇಪಿಸಲಾಗಿದೆ.

ಕೇಂದ್ರದ ಈ ನಿರ್ಧಾರವು ಲಕ್ಷಾಂತರ ವಿದ್ಯಾರ್ಥಿಗಳ ಶಿಕ್ಷಕರ, ಪೋಷಕರ, ಸಿಬ್ಬಂದಿಗಳ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸಿಬಿಎಸ್‍ಇ ಮತ್ತು ಐಸಿಎಸ್‍ಇ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ನಿರ್ದೇಶನ ನೀಡಿತ್ತು. ಯುಜಿಸಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇದಕ್ಕಿಂತ ಬಹಳ ಹೆಚ್ಚಿದೆ. ಮತ್ತೊಂದೆಡೆ ಬಹುಪಾಲು ಶಿಕ್ಷಣ ಸಂಸ್ಥೆಗಳು ಪಠ್ಯಕ್ರಮವನ್ನು ಪೂರ್ಣಗೊಳಿಸಿಲ್ಲ ಮತ್ತು ಈ ದೇಶದಲ್ಲಿ ಆನ್‍ಲೈನ್ ತರಗತಿಗಳ ವ್ಯಾಪ್ತಿಯು ನಗಣ್ಯ. ಅದ್ದರಿಂದ ಈ ಹಿಂದೆಯೇ ಅಂದರೆ ಮೇ ತಿಂಗಳಲ್ಲಿ ಎಐಡಿಎಸ್‍ಓ ಆನ್‍ಲೈನ್ ಶಿಕ್ಷಣವನ್ನು ಆಫ್‍ಲೈನ್ ಶಿಕ್ಷಣಕ್ಕೆ ಪರ್ಯಾಯವೆಂದು ಪರಿಗಣಿಸಬಾರದು ಎಂದು ಆಗ್ರಹಿಸಿದೆ.

ದೇಶದಲ್ಲಿ ಇಂಟರ್ನೆಟ್ ಹೊಂದಿರುವುದರ ಸಂಖ್ಯೆ ಕೇವಲ ಶೇ.37 ಮತ್ತು ಗ್ರಾಮೀಣ ಪ್ರದೇಶದಲ್ಲಿ ಇದು ಶೇ.25ಕ್ಕೆ ಸೀಮಿತವಾಗಿದೆ. ಇದರ ಪರಿಣಾಮ ಸಾವಿರಾರು ವಿದ್ಯಾರ್ಥಿಗಳು ಆನ್‍ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ಚಿಂತಾಜನಕ ಸಂದರ್ಭದಲ್ಲಿ ಎಐಡಿಎಸ್‍ಓ ವಿದ್ಯಾರ್ಥಿಗಳ, ವಿಶೇಷವಾಗಿ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಭವಿಷ್ಯದ ಕುರಿತಾದ ಕಾಳಜಿಯನ್ನು ಅರ್ಥ ಮಾಡಿಕೊಳ್ಳುತ್ತದೆ.

ಈ ನಿಟ್ಟನಲ್ಲಿ ಸರಕಾರವು ಒಂದು ನಿರ್ದಿಷ್ಟ ಪರಿಹಾರವನ್ನು ರೂಪಿಸಬೇಕು ಮತ್ತು ಈ ಕಾಳಜಿಯನ್ನು ತೋರದೆ ಏಕಪಕ್ಷೀಯವಾಗಿ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದರೆ, ಅದರಿಂದ ಅಂತಿಮ ವರ್ಷದ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರವಾಗುವುದಿಲ್ಲ. ಹಾಗೇಯೇ ತೊಂದರೆಗೀಡಾದ ಶೈಕ್ಷಣಿಕ ವೇಳಾಪಟ್ಟಿಯಿಂದ ಮುಂದಿನ ಕೋರ್ಸ್‍ಗಳಿಗೆ ಪ್ರವೇಶ ಪಡೆಯಲು ಯಾವುದೇ ವಿದ್ಯಾರ್ಥಿಯು ವಂಚಿತರಾಗದಂತೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸಮಿತಿ ಅಧ್ಯಕ್ಷೆ ಅಶ್ವಿನಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News