ಗ್ರಾ.ಪಂ.ಚುನಾವಣೆ: ಮತದಾರರ ಪಟ್ಟಿ ತಯಾರಿಸುವ ಕಾರ್ಯಕ್ಕೆ ಚು.ಆಯೋಗ ಚಾಲನೆ

Update: 2020-07-08 18:24 GMT

ಬೆಂಗಳೂರು, ಜು.8: ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-2020ಗೆ ಮತದಾರರ ಪಟ್ಟಿ ತಯಾರಿಸುವ ಕಾರ್ಯಕ್ಕೆ ರಾಜ್ಯ ಚುನಾವಣಾ ಆಯೋಗವು ಚಾಲನೆ ನೀಡಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.

ಗ್ರಾಮ ಪಂಚಾಯತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮತದಾರರನ್ನು ಗುರುತಿಸುವ ಕಾರ್ಯವು ಜು.13 ರಿಂದ 18ರವರೆಗೆ ನಡೆಯಲಿದೆ. ಜು.20 ರಿಂದ 29ರವರೆಗೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಗುರುತಿಸುವುದು. 

ಜು.30 ರಿಂದ ಆಗಸ್ಟ್ 5ರವರೆಗೆ ಮುದ್ರಕರಿಂದ ಪ್ರಥಮ ಚೆಕ್ ಲಿಸ್ಟ್ ಪಡೆದುಕೊಂಡು ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸಬೇಕು. ಆ.6ರಂದು ಪರಿಶೀಲನೆಯ ನಂತರ ಪ್ರಥಮ ಚೆಕ್‍ಲಿಸ್ಟ್ ನಲ್ಲಿ ಆಗಬೇಕಾಗಿರುವ ಬದಲಾವಣೆಗಳನ್ನು ಮುದ್ರಕರಿಂದ ಮಾಡಿಸಿ ಕರಡು ಮತದಾರರ ಪಟ್ಟಿಯ 10 ಪ್ರತಿಗಳನ್ನು ಮುದ್ರಕರಿಂದ ಪಡೆದುಕೊಳ್ಳಬೇಕು.

ಆ.7ರಂದು ಕರಡು ಮತದಾರರ ಪಟ್ಟಿಯನ್ನು ಸಂಬಂಧಪಟ್ಟ ಕಚೇರಿಗಳಲ್ಲಿ ಪ್ರಕಟಿಸಬೇಕು. ಮತದಾರರ ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಸಲ್ಲಿಸಲು ಆ.14ರವರೆಗೆ ಅವಕಾಶ ಕಲ್ಪಿಸಲಾಗಿದೆ. ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ಆ.24ರವರೆಗೆ ಕೊನೆಯ ಅವಕಾಶ ಕಲ್ಪಿಸಲಾಗಿದೆ.

ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಿದ ನಂತರ ಮುದ್ರಕರಿಂದ ಅಗತ್ಯ ಬದಲಾವಣೆಯನ್ನು ಮಾಡಿಸಿ, ಅಂತಿಮ ಚೆಕ್‍ಲಿಸ್ಟ್ ಪಡೆದುಕೊಂಡು ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಆ.30ರೊಳಗೆ ಪರಿಶೀಲಿಸಬೇಕು. ಆ.31ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಸುತ್ತೋಲೆಯಲ್ಲಿ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News