ಕೋವಿಡ್‍ನಿಂದ ಮೃತರಾದವರ ಗೌರವಯುತ ಅಂತ್ಯಕ್ರಿಯೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ: ಎಸ್‍ಯುಸಿಐ

Update: 2020-07-09 11:44 GMT

ಬೆಂಗಳೂರು, ಜು. 9: ಕೊರೋನ ವೈರಸ್ ಸೋಂಕು ಮಿತಿ ಮೀರುತ್ತಿದ್ದು, ಈಗಲಾದರೂ ರಾಜ್ಯ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಯುದ್ಧೋಪಾದಿಯಲ್ಲಿ ಕ್ರಮಕೈಗೊಂಡು, ಕೋವಿಡ್ ಹಾಸಿಗೆಗಳ ಸಂಖ್ಯೆ, ಮೂಲಸೌಲಭ್ಯ, ವೈದ್ಯರು ಮತ್ತು ಇತರ ಸಿಬ್ಬಂದಿಗಳ ಸಂಖ್ಯೆಯನ್ನು ಅವಶ್ಯಕತೆಗೆ ತಕ್ಕಂತೆ ಹೆಚ್ಚಿಸಿಕೊಳ್ಳಬೇಕು ಎಂದು ಎಸ್‍ಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಉಮಾ ಆಗ್ರಹಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲು ಅನುವಾಗುವಂತೆ ಮತ್ತು ಖಾಸಗಿ ಆಸ್ಪತ್ರೆಗಳ ಸಮಸ್ಯೆಗಳನ್ನು ಪರಿಹರಿಸುವ ಅಧಿಕಾರವುಳ್ಳ ಉನ್ನತ ಸಮಿತಿಯನ್ನು ಸರಕಾರ ರಚಿಸಬೇಕು. ಕ್ಯಾನ್ಸರ್, ಹೃದ್ರೋಗ, ಕಿಡ್ನಿ ಸಮಸ್ಯೆ ಮುಂತಾದ ಕಾಯಿಲೆಯುಳ್ಳವರಿಗೆ ಮತ್ತು ಹೆರಿಗೆಗೆ ಬರುವ ಗರ್ಭಿಣಿಯರಿಗೆ ಯಾವುದೇ ಅಡ್ಡಿಯಾಗದಂತೆ ಒಂದು ಸೂಕ್ತ ಪ್ರೊಟೋಕಾಲ್ ನ್ನು ತಕ್ಷಣವೇ ರೂಪಿಸಿ ಜಾರಿಗೆ ತರಬೇಕು.

50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಮತ್ತು ಇತರ ಇಲಾಖೆಗಳ ನೌಕರರಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ನೀಡಬೇಕು. ರೋಗಿಗಳನ್ನು ಸಾಗಿಸಲು ಬೇಕಾದಷ್ಟು ಆಂಬುಲೆನ್ಸ್ ಗಳನ್ನು ವಿವಿಧ ಮೂಲಗಳಿಂದ ರಾಜ್ಯದಾದ್ಯಂತ ಸಿದ್ಧಪಡಿಸಿಕೊಳ್ಳಬೇಕು, ಸ್ವಚ್ಛತಾ ನೌಕರರು ಸೇರಿ ಕೋವಿಡ್ ನಿಯಂತ್ರಣದಲ್ಲಿ ತೊಡಗಿರುವ ಎಲ್ಲ ಮುಂಚೂಣಿ ಯೋಧರಿಗೆ ಅಗತ್ಯ ಸುರಕ್ಷತಾ ಸಾಧನಗಳನ್ನು ಒದಗಿಸಬೇಕು. ವೇತನ ಹೆಚ್ಚಳ, ಖಾಯಂ ಸೇರಿ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಕೋವಿಡ್‍ನಿಂದ ಮೃತರಾದವರ ಗೌರವಯುತ ಅಂತ್ಯಕ್ರಿಯೆಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News