220 ಕೋಟಿ ರೂ.ವೆಚ್ಚದಲ್ಲಿ ವಿಜಯಪುರ ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಂಪುಟ ಅಸ್ತು

Update: 2020-07-09 15:04 GMT

ಬೆಂಗಳೂರು, ಜು. 9: ಉಡಾನ್ ಯೋಜನೆ ವ್ಯಾಪ್ತಿಗೊಳಪಡಿಸಿ ವಿಜಯಪುರ ಜಿಲ್ಲೆಯಲ್ಲಿ 220 ಕೋಟಿ ರೂ.ವೆಚ್ಚದಲ್ಲಿ ನೂತನ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಗುರುವಾರ ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಈ ಸಂಬಂಧ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಈಗಾಗಲೇ ವಿಮಾನ ನಿಲ್ದಾಣಕ್ಕೆ 727 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ಬುರಾನಾಪುರ ಮತ್ತು ಮಾಧುಭಾವಿ ಗ್ರಾಮಗಳ ಸಮೀಪದಲ್ಲಿ 220 ಕೋಟಿ ರೂ. ವೆಚ್ಚದಲ್ಲಿ ಗ್ರೀನ್ ಫೀಲ್ಡ್ ದೇಶಿಯ ಪ್ರಯಾಣದ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಲಾಗುವುದು. ಮೊದಲ ಹಂತದಲ್ಲಿ ಲೆವೆಲಿಂಗ್ ಗ್ರೌಂಡ್ ಫಾರ್ ರನ್ ವೇ, ಟ್ಯಾಕ್ಸಿ ವೇ, ಅಪ್ರೊನ್, ಪಾರ್ಕಿಂಗ್ ಪ್ರದೇಶ, ಟರ್ಮಿನಲ್ ಕಟ್ಟಡ, ರನ್ ವೇ ನಿರ್ಮಾಣ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು 95 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.

ಅಭಿವೃದ್ಧಿಗೆ ಅನುಕೂಲ: ವಿಜಯಪುರ ವಿಮಾನ ನಿಲ್ದಾಣದಿಂದ ಆರಂಭದಲ್ಲಿ 72 ಆಸನಗಳಿರುವ ಎಟಿಆರ್ ವಿಮಾನಗಳು ಬಂದು ಹೋಗಲಿವೆ. 2021ರ ವೇಳೆಗೆ ವಿಜಯಪುರಕ್ಕೆ ವಿಮಾನ ನಿಲ್ದಾಣ ಬರಲಿದೆ. ವಿಜಯಪುರ ಜಿಲ್ಲೆಯು ಐತಿಹಾಸಿಕ ಹಾಗೂ ಪಾರಂಪರಿಕ ಹಿನ್ನೆಲೆ ಹೊಂದಿದ್ದು, ವಿಶ್ವವಿಖ್ಯಾತ ಗೋಳಗುಮ್ಮಟ ಸೇರಿ ಅನೇಕ ಪಾರಂಪರಿಕ ಕಟ್ಟಡಗಳಗಳ ಸಂಗಮ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಉತೃಷ್ಟ ಭೂಮಿಯನ್ನು ಹೊಂದಿದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದ್ದು, ದ್ರಾಕ್ಷಿ, ದಾಳಿಂಬೆ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ಉತ್ಕøಷ್ಠವಾಗಿವೆ. ಒಣದ್ರಾಕ್ಷಿ ಮತ್ತು ನಿಂಬೆ ಹಣ್ಣನ್ನು ಅರಬ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಇತರೆ ಶಿಕ್ಷಣ ಸಂಸ್ಥೆಗಳ ತಾಣವಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಕ್ಕರೆ ಕಾರ್ಖಾನೆಗಳು, ಸಣ್ಣ ಕೈಗಾರಿಕೆಗಳು ಹಾಗೂ ಸಿದ್ದ ಉಡುಪು ತಯಾರಿಕೆ ಮತ್ತು ಪ್ಯಾಕಿಂಗ್ ಘಟಕಗಳಿವೆ. ಪ್ರವಾಸಿಗರು, ವಿದ್ಯಾರ್ಥಿಗಳು, ಉದ್ಯಮಿಗಳನ್ನು ಆಕರ್ಷಿಸಲು ಹಾಗೂ ತೋಟಗಾರಿಕೆ ಉತ್ಪನ್ನಗಳನ್ನು ರಪ್ತು ಮಾಡಲು  ಪ್ರೋತ್ಸಾಹಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ವಿಮಾನ ನಿಲ್ದಾಣವನ್ನು ಲೋಕೋಪಯೋಗಿ ಇಲಾಖೆಯ ಮುಖಾಂತರ ಒಂದು ವರ್ಷದ ಅವಧಿಯೊಳಗೆ ಅಭಿವೃದ್ಧಿ ಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಉದ್ಬವಿಸುವ ಬೇಡಿಕೆಗನುಗುಣವಾಗಿ ವಿಮಾನ ನಿಲ್ದಾಣವನ್ನು ಭವಿಷ್ಯದಲ್ಲಿ ಹಂತಹಂತವಾಗಿ ಮೇಲ್ದರ್ಜೆಗೇರಿಸಲಾಗುವುದು. 2ನೆ ಹಂತದ ಬಾಕಿ ಉಳಿದ ಕಾಮಗಾರಿಗಳಾದ ಎಟಿಸಿ ಮತ್ತು ಪೂರಕ ಕಟ್ಟಡಗಳು, ಇತರ ಏರ್‍ಸೈಡ್ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News