ಶಾ ಅಲೀಂ ದಿವಾನ್ ದರ್ಗಾದಲ್ಲಿ ಅವ್ಯವಹಾರ ಆರೋಪ: ತನಿಖೆಗೆ ಶಿವಮೊಗ್ಗ ಎಸ್‌ಡಿಪಿಐ ಒತ್ತಾಯ

Update: 2020-07-09 12:21 GMT

ಶಿವಮೊಗ್ಗ, ಜು.9: ನಗರದ ಶಾ ಅಲೀಂ ದಿವಾನ್ ದರ್ಗಾ ಕಮಿಟಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಆಗ್ರಹಿಸಿ ಜಿಲ್ಲಾ ವಕ್ಪ್ ಅಧಿಕಾರಿಗೆ ಮನವಿ ಸಲ್ಲಿಸಿದೆ.

ಶಾ ಅಲೀಂ ದಿವಾನ್ ದರ್ಗಾ ಕಾಂಪ್ಲೆಕ್ಸ್ ಕಮಿಟಿಯು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ನ ಅಧೀನಕ್ಕೆ ಒಳಪಟ್ಟಿದೆ. ಕಳೆದ ಕೆಲವು ದಿನಗಳಿಂದ ಕಮಿಟಿಯ ಚುನಾಯಿತ ಸದಸ್ಯರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದು, ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸಾರ್ವಜನಿಕವಾಗಿ ಇಡೀ ಸಮುದಾಯವು ತಲೆತಗ್ಗಿಸಿದಂತಾಗಿದೆ. ದರ್ಗಾ ಕಾಂಪ್ಲೆಕ್ಸ್ ಬಾಡಿಗೆ ಹಾಗೂ ದರ್ಗಾದ ಕಾಣಿಕೆ ಆದಾಯವು ಲಕ್ಷಾಂತರ ರೂಪಾಯಿ ಆಗಿದ್ದು ಕಮಿಟಿಯ ಕೆಲ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಮನವಿದಾರರು ದೂರಿದರು.

ನಡೆದಿರುವ ಭ್ರಷ್ಟಾಚಾರದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಮತ್ತು ಕೂಡಲೇ ಅವರ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಬೇಕು. ಮುಂಬರುವ ದಿನಗಳಲ್ಲಿ ಇಂತಹ ಭ್ರಷ್ಟಾಚಾರಿಗಳು ದರ್ಗಾ ಕಮಿಟಿಯ ಚುನಾವಣೆಯಲ್ಲಿ ಸ್ಪರ್ಧಿಸದ ರೀತಿಯಲ್ಲಿ ನಿರ್ಬಂಧ ಹೇರಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸಲೀಂ ಖಾನ್, ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಮುಜೀಬ್, ಜೀಲಾನ್ ಖಾನ್, ಅಮ್ಜದ್ ಖಾನ್, ಮುಖಂಡರಾದ ಇಸಾಖ್ ಅಹ್ಮದ್ ಮತ್ತು ಜಾವಿದ್ ಬೇಗ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News