ಸರ್ವೇ ನಡೆಸಲು ಬಂದ ತಹಶೀಲ್ದಾರ್ ರನ್ನು ಚೂರಿಯಿಂದ ಇರಿದು ಕೊಲೆಗೈದ ನಿವೃತ್ತ ಶಿಕ್ಷಕ

Update: 2020-07-09 14:54 GMT

ಕೋಲಾರ, ಜು.9: ಸರ್ವೇ ನಡೆಸಲು ಬಂದಿದ್ದ ತಹಶೀಲ್ದಾರ್ ಗೆ ನಿವೃತ್ತ ಶಿಕ್ಷಕರೊಬ್ಬರು ಚೂರಿಯಿಂದ ಇರಿದ ಪರಿಣಾಮ ತಹಶೀಲ್ದಾರ್ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಳವಂಚಿ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ್ ಅವರು ಇಂದು ಸರ್ವೇ ನಡೆಸಲು ಕಳವಂಚಿ ಗ್ರಾಮಕ್ಕೆ ಹೋಗಿದ್ದರು. ಈ ಸಂದರ್ಭ ನಿವೃತ್ತ ಶಿಕ್ಷಕ ವೆಂಕಟಾಚಲಪತಿ, ತಹಶೀಲ್ದಾರ್ ಗೆ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ತಹಶೀಲ್ದಾರ್ ಅವರನ್ನು ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಚಂದ್ರಮೌಳೇಶ್ವರ್ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿ ನಿವೃತ್ತ ಶಿಕ್ಷಕ ವೆಂಕಟಾಚಲಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಕೋಲಾರ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮತ್ತು ಬಂಗಾರಪೇಟೆ ಶಾಸಕ ಎಸ್. ಎನ್ ನಾರಾಯಣಸ್ವಾಮಿ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯನ್ನು ಸರ್ಕಾರಿ ನೌಕರರ ಸಂಘ ತೀವ್ರವಾಗಿ ಖಂಡಿಸಿದ್ದು, ಘಟನೆಗೆ ಕಾರಣವಾದ ದುಷ್ಕರ್ಮಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News